ತೆಂಗು, ಅಡಕೆ ನಷ್ಟ: ದೇವೇಗೌಡರಿಗೆ ಮನವಿ
ಕ.ಪ್ರ. ವಾರ್ತೆ ತುಮಕೂರು ಜು.14
ಶಿರಾ ತಾಲೂಕಿನ ರೈತರಿಗಾಗಿರುವ ತೆಂಗು, ಅಡಕೆ ತೋಟಗಳ ನಷ್ಟದ ಕುರಿತು ಸರ್ಕಾರದ ಗಮನ ಸೆಳೆದು ಪರಿಹಾರ ಸಿಗುವಂತೆ ಮಾಡಲು ಜಿ.ಪಂ. ಸದಸ್ಯ ಸಿ.ಆರ್. ಉಮೇಶ್ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ ಮಾಡಿದರು.
ಶಿರಾ ತಾಲೂಕಿನ ರೈತರ ಜೀವನಾಧಾರವಾದ ಶೇಂಗಾ ಬೆಳೆ ಸತತ 5 ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ವಿಫಲವಾಗುತ್ತಿದ್ದು ಆಂಧ್ರ ಪ್ರದೇಶ ಮಾದರಿಯಲ್ಲಿ ಬೆಳೆ ವಿಮೆ ಮಾಡಿಸಿ ಪರಿಹಾರ ಸಿಗುವಂತೆ ಮಾಡಲು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.
ಶಿರಾ ತಾಲೂಕಿನಲ್ಲಿ 2011-12 ರಲ್ಲಿ 12 ರೈತರು, 2012-13 ರಲ್ಲಿ 6, 2013-14 ರಲ್ಲಿ 5 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟರು. ತಾಲೂಕಿನಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು, 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಸಂಪೂರ್ಣ ಮಳೆಯಾಧಾರಿತ ಪ್ರದೇಶವಾದ ಶಿರಾ ತಾಲೂಕಿನಲ್ಲಿ ಕಂದಾಯ ಇಲಾಖೆ ಪ್ರಥಮ ಮಾಹಿತಿ ಪ್ರಕಾರ 1617 ಎಕರೆ ಅಡಕೆ, ತೆಂಗಿನ ತೋಟಗಳು ಒಣಗಿವೆ. ಇನ್ನು ಸುಮಾರು 500 ಎಕರೆ ಅಡಕೆ, ತೆಂಗಿನ ತೋಟಗಳು ಒಣಗುವ ಹಂತದಲ್ಲಿದೆ ಎಂದು ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟರು.
ಬರ ತಾಂಡವ: ಶಿರಾ ತಾಲೂಕಿನಲ್ಲಿ 8-10 ವರ್ಷಗಳಿಂದಲೂ ಬರ ತಾಂಡವವಾಡುತ್ತಿದ್ದು ಅಂತರ್ಜಲ ಕೂಡ ದಿನೇ ದಿನೇ ಬತ್ತಿ 1 ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಇಳಿದಿದೆ. ಇದರ ನಡುವೆಯೂ ಕೂಡ ಅಳಿದುಳಿದ ಅಡಕೆ, ತೆಂಗಿನ ತೋಟಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ ಎಂದಿದ್ದಾರೆ.
ಶಿರಾ ತಾಲೂಕಿನ ರೈತರ ಪರ ಧ್ವನಿ ಎತ್ತಿದ್ದಲ್ಲಿ ಅವರಿಗೆ ಪರಿಹಾರ ಸಿಗಬಹುದೆಂಬ ಆಶಾಭಾವನೆ ನನ್ನದಾಗಿದೆ ಎಂದು ತಿಳಿಸಿದ್ದಾರೆ. ರೈತರ ಆತ್ಮಹತ್ಯೆಗೆ ಸತತ ಬೆಳೆ ವೈಫಲ್ಯವೇ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 1 ಲಕ್ಷ ರು. ಪರಿಹಾರ ಕೊಡುತ್ತಿದ್ದರೂ ಅದು ಸಕಾಲದಲ್ಲಿ ತಲುಪುತ್ತಿಲ್ಲ. ಅಲ್ಲದೇ ಅಧಿಕಾರಿಗಳು ಇಲ್ಲ ಸಲ್ಲದ ದಾಖಲೆಗಳನ್ನು ಕೇಳಿ ರೈತರನ್ನು ಶೋಷಿಸುತ್ತಿದ್ದಾರೆ. ಪರಿಹಾರವನ್ನೂ ಕೊಡುತ್ತಿಲ್ಲ ಎಂದಿದ್ದಾರೆ.
ತಮಿಳುನಾಡು ಸರ್ಕಾರದ ಮಾದರಿಯಲ್ಲಿ ರೈತರಿಗೆ ತಕ್ಷಣವೇ 5 ಲಕ್ಷ ರು. ಪರಿಹಾರ ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ನೀಡಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕಾದ ಅಗತ್ಯವಿದೆ. ಆತ್ಮಹತ್ಯೆಗೆ ಒಳಗಾದ ರೈತರ ಎಲ್ಲಾ ಸಾಲವನ್ನು ಸರ್ಕಾರವೇ ಭರಿಸುವಂತೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.