ಪೌರಾಣಿಕ ನಾಟಕಗಳಿಗೆ ಇದ್ದ ಗತ್ತು ಸಾಮಾಜಿಕ ನಾಟಕಗಳಿಗಿಲ್ಲ: ನಾಗಣ್ಣ
ಕ.ಪ್ರ. ವಾರ್ತೆ ತುಮಕೂರು ಜು.14
ಪೌರಾಣಿಕ ನಾಟಕಗಳಿಗೆ ಇದ್ದ ಗತ್ತು, ಗಾಂಭೀರ್ಯ ಇಂದಿನ ಸಾಮಾಜಿಕ ನಾಟಕಗಳಿಗಿಲ್ಲ ಎಂದು ಪತ್ರಿಕೋದ್ಯಮಿ ಎಸ್.ನಾಗಣ್ಣ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ರಂಗ ಕೀರ್ತನ ಸಂಪದ ಮಲ್ಲಸಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಪೌರಾಣಿಕ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು,ಪೌರಾಣಿಕ ನಾಟಕಗಳು ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದು, ಗ್ರಾಮೀಣ ಭಾಗದ ಮನರಂಜನೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಯಮಿ ಹಾಗೂ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸ್ಥಾಪಕ ಶಾಂತಿಲಾಲ್ ಮಾತನಾಡಿ, ದೃಶ್ಯ ಮಾಧ್ಯಮದಿಂದಾಗಿ ಜನಮನದ ಜೀವನಾಡಿಯಾಗಿದ್ದ ಪೌರಾಣಿಕ ನಾಟಕಗಳು ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿದ್ದ ಕೋಲಾಟ, ನಾಟಕ, ಭಜನೆ ಜನರಿಂದ ಕಣ್ಮರೆಯಾಗಿ ಆ ಜಾಗವನ್ನು ಪಾಶ್ಚಾತ್ಯ ಸಂಸ್ಕೃತಿಯ ಬೇರೆ ಕಲಾ ಪ್ರಕಾರಗಳು ಅಕ್ರಮಿಸಿಕೊಳ್ಳುತ್ತಿವೆ. ನಮ್ಮ ಯುವಜನತೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತ ಗಮನಹರಿಸಬೇಕಾಗಿದೆ.
ನಮ್ಮ ಸಾಮಾಜಿಕ ಪರಿಸ್ಥಿತಿಯ ಕೈಗನ್ನಡಿಯಾಗಿದ್ದ ನಾಟಕಗಳನ್ನು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳುವ ಮೂಲಕ ಜನರಿಗೆ ವಾಸ್ತವದ ಪರಿಚಯ ಮಾಡಿಕೊಡಬೇಕಾಗಿದೆ ಎಂದರು. ನಟನೆ ಕೇವಲ ಪ್ರೇಕ್ಷಕರಿಗೆ ಖುಷಿ ನೀಡಿದರೆ ಸಾಲದು. ಕಲಾವಿದನಿಗೂ ಸಂತೋಷ ನೀಡುವಂತಿರಬೇಕು. ಕಲಾವಿದರ ಕಲ್ಪನೆಗೆ ಪಾತ್ರ ನಿಲುಕಿದಾಗ ಮಾತ್ರ ಅದ್ವಿತೀಯ ಅಭಿನಯ ನೀಡಲು ಸಾಧ್ಯ. ನಾಟಕ ಬರೆಯುವವರ ಉದ್ದೇಶ ಬೇರೆ ಬೇರೆಯಾಗಿದ್ದಂತೆ ಕಲಾವಿದ ಉದ್ದೇಶವೂ ಬೇರೆ ಬೇರೆಯಾಗಿರುತ್ತದೆ. ಇವುಗಳನ್ನು ಮರೆಸುವಂತೆ ನಾಟಕ ಮೂಡಿಬರಬೇಕೆಂದರು. ಕಲಾವಿದ ತುಂಬಾಡಿ ಶ್ರೀನಿವಾಸ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜು ಅಪ್ಪಿನಕಟ್ಟೆ ಅವರಿಗೆ ರಂಗಗೌರವ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕಲಾಶ್ರೀ ಡಾ.ಲಕ್ಷ್ಮಣದಾಸ್, ರಂಗಭೂಮಿ ಕಲಾವಿದೆ ಮಂಜುಳ, ಉದ್ಯಮಿ ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.