ಶಿಕ್ಷಣ ಸಂಸ್ಥೆಗಳಲ್ಲಿ ಗ್ರಂಥಾಲಯ ಅತಿ ಮಹತ್ವ
ಕ.ಪ್ರ. ವಾರ್ತೆ ತುಮಕೂರು ಜು.14
ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಗ್ರಂಥಾಲಯಗಳು ಶಿಕ್ಷಕರು ಮತ್ತು ವಿದ್ಯಾರ್ಥಿ ಸ್ನೇಹಿಯಾಗಿದ್ದರೆ ಮಾತ್ರ ಅವುಗಳಿಂದ ಉಪಯೋಗವಾಗುತ್ತದೆ ಎಂದು ಸಿಎಂಡಿ ಇನ್ಫಾರ್ಮಟಿಕ್ ಸಂಸ್ಥೆಯ ಮುಖ್ಯಸ್ಥ ಎನ್.ವಿ. ಸತ್ಯ ನಾರಾಯಣ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ಪಿಯು ಕಾಲೇಜು ಗ್ರಂಥಪಾಲಕರ ಸಂಘ ಹಾಗೂ ಎಸ್ಎಸ್ಐಟಿ ಸಂಯುಕ್ತವಾಗಿ ಆಯೋಜಿಸಿದ್ದ ಎರಡು ದಿನಗಳ ಗ್ರಂಥಾಲಯ ಸೇವೆಗಳ ಪ್ರೇರಣೆ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ಗ್ರಂಥಾಲಯಗಳು ಅವಶ್ಯಕ. ಗ್ರಂಥಾಲಯಗಳ ಕುರಿತ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸಮಾಜದಲ್ಲಿ ಅಂತರ್ಜಾಲವನ್ನು ಬಳಕೆ ಮಾಡುವ ಮತ್ತು ಮಾಹಿತಿ ಸಂಗ್ರಹಿಸುವವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಗ್ರಂಥಾಲಯಗಳಲ್ಲಿ ಅಂತರ್ಜಾಲ ಲಭ್ಯವಿದ್ದರೆ ಪುಸ್ತಕಗಳನ್ನು ಯಾರು ಓದುತ್ತಾರೆ ಎಂದು ಸತ್ಯ ನಾರಾಯಣ್ ಪ್ರಶ್ನಿಸಿದರು.
ಪ್ರಶಾಂತ ಸ್ಥಳ: ಅಂರ್ತಜಾಲದಲ್ಲಿ ಎಲ್ಲ ರೀತಿಯ ಮಾಹಿತಿಯನ್ನು ಪಡೆಯಲು ಸಾಧ್ಯವಿದ್ದರೂ ಗ್ರಂಥಾಲಯಗಳಂತೆ ಪ್ರಶಾಂತವಾದ ಸ್ಥಳ ಲಭ್ಯವಿಲ್ಲ. ಓದಲು ಅತಿ ಮುಖ್ಯವಾಗಿ ಬೇಕಿರುವುದು ಪ್ರಶಾಂತವಾದ ಸ್ಥಳ. ವಿದ್ಯಾರ್ಥಿಗಳನ್ನು ಗ್ರಂಥಾಲಯಗಳತ್ತ ಆಕರ್ಷಿಸಲು ಗ್ರಂಥಾಲಯ ಕೆಂದ್ರೀಕೃತವಾದ ವಿವಿಧ ಸ್ವರ್ಧೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಅವರು ಹೇಳಿದರು.
ಎಸ್ಎಸ್ಐಟಿ ಆಡಳಿತಾಧಿಕಾರಿ ಪ್ರೊ.ಸಿ.ಎನ್. ನರಸಿಂಹಮೂರ್ತಿ ಮಾತನಾಡಿ, ಗ್ರಂಥಪಾಲಕರ ಎಲ್ಲ ಸಂಘಗಳು ಒಗ್ಗೂಡಿ ಒಕ್ಕೂಟ ರಚಿಸಿಕೊಂಡು ತಮ್ಮ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದಾಗ ಒಕ್ಕೂಟಕ್ಕೆ ಒಂದು ಬಲ ಬರುತ್ತದೆ ಮತ್ತು ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರದ ಪ್ರೊ. ಕೆ.ಎನ್. ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್, ರಾಜ್ಯ ಪಿಯು ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷರಾದ ಡಾ.ಕಾಡದೇವರಮಠ್, ಉಪಾಧ್ಯಕ್ಷರಾದ ಸುನೀತ ರಾಮಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.
ಜೀವನ ಶ್ರೇಷ್ಠ ಸಾಧನೆಗಾಗಿ ಕರ್ನಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷರು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿವೃತ್ತ ನಿರ್ದೇಶಕ ರಾಜೇಂದ್ರ ಕುಮಾರ್ ಅವರಿಗೆ ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ನಿವೃತ್ತರಾದ ಗ್ರಂಥಪಾಲಕರನ್ನು ಸನ್ಮಾನಿಸಲಾಯಿತು.