ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 14 Jul 2013, 11:21 am

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಕುಣಿಗಲ್: ತಾಲೂಕಿನ ಕೊತ್ತಗೆರೆ, ಬಾಗೇನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿದ್ದ 1.80 ಕೋಟಿ ಸರ್ಕಾರದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಣಿಗಲ್ ಪೊಲೀಸರು ವಶಕ್ಕೆ ಪಡೆದಿದ್ದ ಗ್ರಾಪಂ ಸಿಬ್ಬಂದಿಗಳಾದ ಶಿವಕುಮಾರ್, ರಾಮಣ್ಣ, ಮಹಾದೇವಯ್ಯನವರನ್ನು ಬಂಧಿಸಿ, ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಆದೇಶದ ಹಿನ್ನೆಲೆಯಲ್ಲಿ, ಪೊಲೀಸರು ಮುಂದಿನ ಕ್ಪಮ ಕೈಗೊಂಡಿದ್ದಾರೆ.
ಶಾಸಕರ ಗ್ರಾಮದಲ್ಲೇ ನೀರಿಗೆ ಹಾಹಾಕಾರ
ತಿಪಟೂರು: ತಾಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಸಕ ಕೆ.ಷಡಕ್ಷರಿಯವರ ಸ್ವಗ್ರಾಮವಾದ ಕಲ್ಲೇಗೌಡಪಾಳ್ಯದಲ್ಲಿ ಕಳೆದ 2 ತಿಂಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದ್ದು, ಶಾಸಕರಾದಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2 ತಿಂಗಳ ಹಿಂದೆಯೇ ಈ ಗ್ರಾಮದ ಬೋರ್‌ನಲ್ಲಿ ನೀರಿಲ್ಲದ್ದರಿಂದ ಹೊಸ ಬೋರ್‌ವೆಲ್ ಕೊರೆಸಿ ನೀರು ಬಂದಿದ್ದರೂ ಸಹ ಇದುವರೆಗೂ ಪಂಪು-ಮೋಟರ್ ಅಳವಡಿಸಿಲ್ಲ. ಈ ಬೋರ್‌ವೆಲ್ ನೀರನ್ನೇ 150ಕ್ಕೂ ಹೆಚ್ಚು ಮನೆಗಳ ರೈತರು ತಮಗೂ ಹಾಗೂ ತಮ್ಮ ಜಾನುವಾರುಗಳಿಗೂ ನಂಬಿಕೊಂಡಿದ್ದಾರೆ. ಸದ್ಯ ದಿನಕ್ಕೆ 2 ಟ್ಯಾಂಕರ್ ನೀರನ್ನು ಮಾತ್ರ ಗ್ರಾಮ ಪಂಚಾಯಿತಿ ಕಳುಹಿಸುತ್ತಿದ್ದು, ಈ ನೀರು ಸಾಲದೆ ದಿನನಿತ್ಯವೂ ಇಲ್ಲಿ ನೀರಿಗಾಗಿ ಜಗಳವಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಉಳ್ಳವರು ಮಾತ್ರ ಈ ನೀರಿಗಾಗಿ ಕಿತ್ತಾಡಿ-ಜಗಳವಾಡಿ ಸಾಕಾಗಿ ಟ್ಯಾಂಕರ್ ಒಂದಕ್ಕೆ ರು. 300ರಂತೆ ಹಣ ತೆತ್ತು ನೀರು ಹಾಕಿಸಿಕೊಂಡು ಶಾಸಕರು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಗ್ರಾಮಸ್ಥರು ಜಿಲ್ಲಾ ಪಂಚಾಯಿತಿಯವರನ್ನು ಕೇಳಿದರೆ ಗ್ರಾಮ ಪಂಚಾಯಿತಿಯವರನ್ನು ಕೇಳಿ ಎನ್ನುತ್ತಾರೆ. ಹೀಗೆಯೇ ಅಧಿಕಾರಿಗಳು ಇಂದು, ನಾಳೆ ಎಂದು ಕಾಲ ತಳ್ಳುತ್ತಿದ್ದಾರೆಯೇ ವಿನಃ ಮೋಟರ್ ಅಳವಡಿಸುವ ಗೋಜಿಗೂ ಹೋಗದೆ ನಿರ್ಲಕ್ಷ್ಯ ವಹಿಸಿರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಎಂದರು.
ಮೋಡ ಬಿತ್ತನೆಗೆ ಬಿಬಿಎಸ್ ಒತ್ತಾಯ
ತಿಪಟೂರು: ತೀವ್ರ ಬರಗಾಲ ತಲೆದೋರಿಸುವ ಹಿನ್ನಲೆಯಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಿ ತೆಂಗು ಮತ್ತು ಅಡಿಕೆ ಮರಗಳನ್ನು ಉಳಿಸಬೇಕೆಂದು ಎಪಿಎಂಸಿ ಸದಸ್ಯ ಬಿ.ಬಿ. ಸಿದ್ದಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ 4ವರ್ಷಗಳಿಂದಲೂ ದೇಶದ ಸಂಪತ್ತಾದ ತೆಂಗು ಮತ್ತು ಅಡಿಕೆ ಮರಗಳು ಮಳೆ ಇಲ್ಲದೆ ಒಣಗುತ್ತಿವೆ. ಬಯಲು ಸೀಮೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಆದ್ದರಿಂದ ಸರ್ಕಾರ ಆದಷ್ಟೂ ಜಾಗ್ರತಿ ವಹಿಸಿ ಮೋಡ ಬಿತ್ತನೆ ಮಾಡಿಸಿ ತೆಂಗು ಮತ್ತು ಅಡಿಕೆ ಮರಗಳನ್ನು ಉಳಿಸಬೇಕೆಂದು ಬಿ.ಬಿ. ಸಿದ್ದಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement