ಡಿಸಿ ಚೇಂಬರ್ಗೆ ನುಗ್ಗಿ ಟೇಬಲ್ ಕುಟ್ಟಿದ ಮಹಿಳೆಯರು
ಕ.ಪ್ರ.ವಾರ್ತೆ ತುಮಕೂರು ಜು.15
ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠ ಹಾಗೂ ಸಿಡಿಯಜ್ಜನಪಾಳ್ಯದ ವಂಶಸ್ಥರ ನಡುವೆ ನಡೆದಿರುವ ಶವ ಸಂಸ್ಕಾರ ಜಾಗ ವಿವಾದ ತಾರಕಕ್ಕೇರಿದೆ.
ಮಠದ ತೋಪಿನ ಆವರಣದಲ್ಲಿ ಸಿಡಿಯಜ್ಜನಪಾಳ್ಯದ ವಂಶಸ್ಥರಿಗೆ ಮೀಸಲಿಟ್ಟ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ನಿರಾಕರಿಸಿ, ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿರುವ ಅಹಿಂದ ಸಂಘಟನೆಗಳ ಮುಖಂಡರು, ನಂಜಾವಧೂತ ಸ್ವಾಮಿಗಳ ನಿಲುವನ್ನು ಖಂಡಿಸಿ ಭಾನುವಾರ ತುಮಕೂರಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದರು. ಸೋಮವಾರ ಜಾಥಾ ತುಮಕೂರಿಗೆ ಆಗಮಿಸಿತು. ಸಂಜೆ 4.35 ರ ವೇಳೆಗೆ ಜಾಥಾ ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿದ ವೇಳೆ ತೀವ್ರ ಆಕ್ರೋಶಗೊಂಡಿದ್ದ ಸಂಘಟನೆಯ ವಿವಿಧ ಮುಖಂಡರು, ಕುರುಬ ಮುಖಂಡರು, ಕಾರ್ಯಕರ್ತರು ತುಮಕೂರಿನ ಅಶೋಕ ರಸ್ತೆ, ಟೌನ್ಹಾಲ್, ಎಂಜಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಂಜಾವಧೂತರ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಗೇಟ್ ತೆಗೆದು ಒಳ ನುಗ್ಗಿದ ಅಹಿಂದ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಆಕ್ರೋಶಭರಿತರಾಗಿ ನಂಜಾವಧೂತರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಹಿಂದಿನಿಂದ ಬಂದ ಮಹಿಳೆಯರ ಗುಂಪೊಂದು, ನಂಜಾವಧೂತ ಸ್ವಾಮಿಗಳ ವಿರುದ್ಧ ಘೋಷಣೆ ಕೂಗಿ, ಜಿಲ್ಲಾಧಿಕಾರಿ ಕಚೇರಿ ಚೇಂಬರ್ ಒಳನುಗ್ಗಿ, ಡಿಸಿ ಟೇಬಲ್ ಕುಟ್ಟಿ, ನ್ಯಾಯ ಒದಗಿಸುವಂತೆ ಆಗ್ರಹಿಸಿತು. ಈ ವೇಳೆ ಮಹಿಳೆಯರ ಬಳೆಗಳು ಒಡೆದವು. ಮಹಿಳೆಯರು ತಂದಿದ್ದ ಭಿತ್ತಿಪತ್ರಗಳು ಬಿದ್ದಿದ್ದವು. ಚೇಂಬರ್ನಲ್ಲೇ ಇದ್ದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಒಂದು ಕ್ಷಣ ಬೆಚ್ಚಿ ಬಿದ್ದರು. ನಂತರ ಸಾವರಿಸಿಕೊಂಡು, ತಾಳ್ಮೆ ವಹಿಸಿ ಮಹಿಳೆಯರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ನಾನು ಹೊಸಬ: ನಾನು ಹೊಸಬ ಎಂದು ಮಾತು ಆರಂಭಿಸಿದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ದಾಖಲಾತಿ ನೀಡಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ, ಅರ್ಥಮಾಡಿಕೊಳ್ಳುತ್ತೇನೆ. 10 ಅಥವಾ 5 ಮಂದಿ ಬಂದು ಹೇಳಿ. ನನ್ನ ಕಡೆಯಿಂದ ಯಾವುದೇ ತಪ್ಪಾಗದಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಬಂದಿದ್ದ ಜನತೆ ಜಿಲ್ಲಾಧಿಕಾರಿ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ. ದಾಸಪ್ಪ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ರಾಮಚಂದ್ರಪ್ಪ, ನಿವೃತ್ತ ಸಿಪಿಐ ರಂಗಸ್ವಾಮಿ, ಇಂದಿರಾ ವಿದ್ಯಾಸಂಸ್ಥೆಯ ಶಿವಮೂರ್ತಿ, ಕಾಳಿದಾಸ ವಿದ್ಯಾವರ್ಧಕ ಸಂಘದ ನಂಜರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಕುರುಬ ಸೇನೆಯ ಗುರುಪ್ರಸಾದ್, ಮಹಾಲಿಂಗಪ್ಪ, ವಕೀಲ ರವಿಕುಮಾರ್, ಜಿಲ್ಲಾ ಕನಕ ಯುವಸೇನೆಯ ಕೆಂಪರಾಜು, ಭಾನುಪ್ರಕಾಶ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ಕುರುಬ ಮುಖಂಡರು, ಕಾರ್ಯಕರ್ತರು, ಬಹುತೇಕ ಕುರುಬ ಜನಾಂಗದ ಮುಖಂಡರು, ಕುರಬ ಜನಾಂಗದವರು ಪಾಲ್ಗೊಂಡಿದ್ದರು. ಸುಮಾರು 2000 ಕ್ಕಿಂತ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.