ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವಿದ್ಯಾರ್ಥಿ ಸೇರಿ ನಾಲ್ವರ ಸಾವು
ಕ.ಪ್ರ. ವಾರ್ತೆ ಕುಣಿಗಲ್ ಜು.15
ಭಾನುವಾರ ಬೆಳಗಿನಿಂದ ಸೋಮವಾರ ಬೆಳಗ್ಗೆವರೆಗೂ ತಾಲೂಕಿನ ವಿವಿಧೆಡೆ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವಿದ್ಯಾರ್ಥಿ ಸೇರಿದಂತೆ ನಾಲ್ವರು ಮೃತಪಟ್ಟರೆ, ಮೂವರು ಗಾಯಗೊಂಡಿರುವ ಘಟನೆ ವರದಿಯಾಗಿವೆ.
ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ರಿಪೇರಿಗೆ ಕೊಟ್ಟಿದ್ದ ವಾಚ್ ತೆಗೆದುಕೊಂಡು ಬರಲು ರಸ್ತೆಯ ಎಡಬದಿಯಲ್ಲಿ ಬೈಕ್ನಲ್ಲಿ ಹೊರಟಿದ್ದ ವಿದ್ಯಾರ್ಥಿ ಆಕಾಂಕ್ಷ್(14) ಎಂಬಾತನಿಗೆ, ಎದುರುಬದಿಯಿಂದ ವೇಗವಾಗಿ ಬಂದ ಟಾಟಾ ಸುಮೋ ವಾಹನ, ಪೊಲೀಸ್ಠಾಣೆ ಮುಂಬಾಗದಲ್ಲೇ ಅಪ್ಪಳಿಸಿದ ಕಾರಣ, ಆಕಾಂಕ್ಷ್ ಹೊಟ್ಟೆ, ತಲೆಗೆ ಪೆಟ್ಟು ಬಿದ್ದು, ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ.ಅಪಘಾತಕ್ಕೆ ಕಾರಣನಾದ ಚಾಲಕನ್ನು ಸಾರ್ವಜನಿಕರು ಹಿಡಿದು ನೋಡಲಾಗಿ, ನಿಲ್ಲಲು ತ್ರಾಣವಿಲ್ದದಷ್ಟು ಚಾಲಕ ಪಾನಮತ್ತನಾಗಿದ್ದ. ಸದರಿ ಚಾಲಕ, ಪಟ್ಟಣದ ಕಾಂಗ್ರೆಸ್ ರಾಜಕಾರಣಿಯೊಬ್ಬರು ರಂಗನಾಥಸ್ವಾಮಿ ಗುಡ್ಡದಲ್ಲಿ ಆಯೋಜಿಸಿದ್ದ ಬಾಡೂಟದಲ್ಲಿ ಮಧ್ಯಾಹ್ನದಿಂದಲೂ ಮದ್ಯಪಾನ ಮಾಡಿ, ರಾತ್ರಿ ಬಾಡೂಟಕ್ಕೆ ಆಗಮಿಸಿದ್ದ ಕೆಲ ಸ್ನೇಹಿತರನ್ನು ಬಿಟ್ಟು, ಮತ್ತೆ ಹಿಂದಿರುಗುವಾಗ, ನಿಯಂತ್ರಣ ತಪ್ಪಿ, ತನ್ನ ಪಾಡಿಗೆ ತಾನು ಬರುತ್ತಿದ್ದು ಬೈಕ್ ಚಾಲಕನಿಗೆ ಗುದ್ದಿ, ಅತನ ಸಾವಿಗೆ ಕಾರಣನಾದ.
ಧರ್ಮದೇಟು: ಸುಮೋ ಬಳಿ ತೆರಳಿ ನೋಡಿದಾಗ ಮದ್ಯದ ಅಮಲಿನಲ್ಲಿದ್ದ ಚಾಲಕ ಶ್ರೀನಿವಾಸ್ ಅಲಿಯಾಸ್ ತರಕಾರಿಸೀನ, ಸಾರ್ವಜನಿಕರನ್ನೇ ನಿಂದಿಸಿದ ಹಿನ್ನೆಲೆಯಲ್ಲಿ, ಕೋಪಗೊಂಡ ಸಾರ್ವಜನಿಕರು ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ನೀಡಿದರೆಂದು ಪ್ರತ್ಯಕ್ಷ್ಯದರ್ಶಿಗಳಾದ ಲೋಕೇಶ್, ಶ್ರೀನಿವಾಸ್ ಇತರರು ತಿಳಿಸಿದ್ದು, ಘಟನೆಗೆ ಸಂಬಧಿಸಿದಂತೆ ಹರೀಶ್ ದೂರು ನೀಡಿದ ಮೇರೆಗೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ, ಸುಮೋವಾಹನ ಹಾಗೂ ಚಾಲಕನನ್ನು ಬಂಧಿಸಿದ್ದಾರೆ.
ಬೈಕ್ ನಡುವೆ ಡಿಕ್ಕಿ: ಸೋಮವಾರ ಬೆಳಗ್ಗೆ ಪಟ್ಟಣದ ದೊಡ್ಡಕೆರೆ ಏರಿಯ ಕೊತ್ತಗೆರೆ ಕೋಡಿ ಪ್ರದೇಶದ ಸಮೀಪ ನಡೆದ ಎರಡು ಬೈಕ್ಗಳ ನಡುವಿನ ಅಪಘಾತದಲ್ಲಿ ಬೈಕ್ ಚಾಲಕನೋರ್ವ ಮೃತಪಟ್ಟರೆ, ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಮೃತನನ್ನು ಬೆಂಗಳೂರು ಗುಡ್ಡದಹಳ್ಳಿ ಜನತಾ ಕಾಲೋನಿಯ ಯೋಗೇಶ್(19) ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಸೋಲಾರ್ ಪ್ಯಾನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಯನಿಮಿತ್ತ ಕುಣಿಗಲ್ ಕಡೆಗೆ ಬರುವಾಗ, ಕೊತ್ತಗೆರೆಯ ಕೋಡಿಪ್ರದೇಶದ ಸಮೀಪ, ಕುಣಿಗಲ್ನಿಂದ ಗುಬ್ಬಿಕಡೆಗೆ ತೆರಳುತ್ತಿದ್ದ ನಾಗೇಶ, ಶ್ರೀರಾಮ್ ಎಂಬುವರ ಬೈಕ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಮೃಪಟ್ಟರೆ, ಹಿಂಬದಿ ಸವಾರ ರಂಗಸ್ವಾಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೊರ್ವ ಬೈಕ್ ಚಾಲಕ ಶ್ರೀರಾಮ್ ಗಂಭೀರವಾಗಿ ಗಾಯಗೊಂಡಿದ್ದರೆ, ಸವಾರ ನಾಗೇಶ್ ಪಾರ್ದ್ದಾನೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯೋಗೇಶ್, ವೆಂಕಟೇಶ್, ಗೌರಮ್ಮ ದಂಪತಿಯ ಒಬ್ಬನೇ ಮಗನಾಗಿದ್ದು ಆಸ್ಪತ್ರೆ, ಪೊಲೀಸ್ ಠಾಣೆಯ ಬಳಿ ಸಂಬಂಧಿಕರ ರೋದನ ಮನಕಲುಕುವಂತಿತ್ತು. ಭಾನುವಾರ ಮಧ್ಯಾಹ್ನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಹೊನ್ನಮಾಚನಹಳ್ಳಿಯ ಬಳಿ ರಸ್ತೆಬದಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ, ಅಪರಿಚಿತ ಗೂಡ್ಸ್ ಡಿಕ್ಕಿಹೊಡೆದು ಪರಾರಿಯಾದ ಕಾರಣ, ಆತ ಗಾಯಗೊಂಡು ಕುಣಿಗಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮೂದೂರು ಹೊಸೂರು ಗ್ರಾಮದ ದೊಡ್ಡರಾಜಪ್ಪ (65) ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಸಂಬಂಧಿಕರು ದೂರು ನೀಡಿದ್ದಾರೆ.
ಮರಕ್ಕೆ ಡಿಕ್ಕಿ: ಸಾವು: ಭಾನುವಾರ ಸಂಜೆ ಮದ್ದೂರಿನಿಂದ ತುಮಕೂರುಕಡೆಗೆ ಬರುತ್ತಿದ್ದ ತಮಿಳುನಾಡು ನೋಂದಣಿಯ ಖಾಲಿ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಡಿ.ಹೊಸಹಳ್ಳಿ ಗ್ರಾಮದ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ ಕಾರಣ ಚಾಲಕ ಸತ್ಯಮಂಗಲದ ವಾಸಿ ಸುಬ್ರಹ್ಮಣ್ಯ( 35) ಸ್ಥಳದಲ್ಲೆ ಮೃತಪಟ್ಟಿದ್ದಾರೆ