ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೇಟೆಗೆ ಬಂದ ಜಾಂಬವಂತ

Rashmi Kasaragodu
Updated On : 17 Jul 2013, 12:16 pm

ಕ.ಪ್ರ.ವಾರ್ತೆ   ತುಮಕೂರು   ಜು.16
ಭರ್ತಿ 7 ಗಂಟೆಗಳ ಕಾಲ ತುಮಕೂರು ನಗರದ ತುಂಬೆಲ್ಲಾ ಅಡ್ಡಾಡಿದ ಕರಡಿಯನ್ನು ಕೊನೆಗೂ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ.
ಬೆಳಗಿನ ಜಾವ 3 ಗಂಟೆಗೆ ಗುಬ್ಬಿ ಗೇಟ್ ಬಳಿ ಕಾಣಿಸಿಕೊಂಡು ಈ ಕರಡಿ ಸುಮಾರು 7 ಗಂಟೆಗಳ ಕಾಲ ಅರಣ್ಯ ಇಲಾಖೆಯವರಿಗೆ, ಜನರನ್ನು ಕಣ್ಣು ತಪ್ಪಿಸಿ ಅಡ್ಡಾಡಿ ಮನರಂಜನೆಯನ್ನು ಒದಗಿಸಿತು.
ಬನ್ನೇರುಘಟ್ಟದ ಅರಿವಳಿಕೆ ತಜ್ಞ ಡಾ.ಅರುಣ್ ನೇತೃತ್ವದ ತಂಡ ಯಶಸ್ವಿಗೊಳಿಸಿದ ಕಾರ್ಯಾಚರಣೆ ಆತಂಕದಲ್ಲಿದ್ದ ಜನತೆ ನಿಟ್ಟುಸಿರು ಬಿಡುವಂತೆ ಮಾಡಿತು.
ಎರಗಿದ ಕರಡಿ: ಗುಬ್ಬಿಗೇಟ್ ಪಕ್ಕದಲ್ಲೇ ಇದ್ದ ಎಸ್ಎಸ್ ಗ್ಯಾರೇಜ್ ವಾಚ್ಮೆನ್ ಸೀಬಯ್ಯನ ಮೇಲರೆಗಿ ಗಾಯಗೊಳಿಸಿದೆ. ಬಳಿಕ ಮುಂದೆ ಸಾಗಿ ಮಂಜುನಾಥ ರೈಸ್ ಮಿಲ್ಗೆ ನುಗ್ಗಿ ಕಾರ್ಮಿಕ ಹನುಮೇಶ್ನನ್ನೂ ಗಾಯಗೊಳಿಸಿದೆ. ಬಳಿಕ ಹನುಮೇಶ್ನ ಚೀರಾಟದಿಂದ ಹೊರಬಂದ ಕಾರ್ಮಿಕರು ಹನುಮೇಶ್ನನ್ನ ಆಸ್ಪತ್ರೆಗೆ ಕೊಂಡೊಯ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸೆರೆ: ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಿಲಕ್ಪಾರ್ಕ್ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಿ.ಜಿ.ಪಾಳ್ಯ ಸರ್ಕಲ್ನಲ್ಲಿ ಬೀಡು ಬಿಟ್ಟಿದ್ದ ಕರಡಿಯನ್ನ ಸೆರೆ ಹಿಡಿಯಲು ಮುಂದಾದರು. ಬೆಳಿಗ್ಗೆ 7 ಗಂಟೆಯಾದರೂ  ಜಾಂಬವಂತ ಸೆರೆ ಸಿಕ್ಕದ ಪರಿಣಾಮ ಬನ್ನೇರುಘಟ್ಟದಿಂದ ಅರಿವಳಿಕೆ ತಜ್ಞರನ್ನು ಆಹ್ವಾನಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ಆಗಮಿಸಿದ ಡಾ.ಅರುಣ್ ನೇತೃತ್ವದ ತಂಡ ಮನೆಯ ಕಾಂಪೌಂಡ್ವೊಂದರಲ್ಲಿ ಅವಿತು ಕುಳಿತಿದ್ದ ಕರಡಿಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಿತು.
ಬೆಳಿಗ್ಗೆ 10 ಗಂಟೆಯಾದರೂ ವಠಾರದಲ್ಲೇ ಕರಡಿ ಬೀಡು ಬಿಟ್ಟಿದ್ದರಿಂದ ಮನೆಯಿಂದ ಹೊರಬಾರದ ಜನತೆ ಆತಂಕದಲ್ಲೇ ಕಾಲ ಕಳೆದರು. ಕರಡಿಯನ್ನು ಹಿಡಿಯುವವರೆಗೂ ಜೀವ ಕೈಯಲ್ಲಿಡಿದಂತೆ ಮನೆಯಲ್ಲೇ ಉಳಿದುಕೊಂಡಿದ್ದರು. ಅರಿವಳಿಕೆ ತಜ್ಞರು ಬಂದು ಕರಡಿಯನ್ನು ಹಿಡಿಯುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟರು. ಹೀಗೆ ಸುದೀರ್ಘ 7 ಗಂಟೆ ಕಾಲ ನಡೆದ ಕಾರ್ಯಾಚರಣೆಯನ್ನು ನೋಡಲು ಸಹಸ್ರಾರು ಮಂದಿ ನೆರೆದಿದ್ದರು. ಅತ್ತ ಕರಡಿಯನ್ನು ಹೇಗಾದರೂ ಹಿಡಿಬೇಕೆಂದು ಮಗ್ನರಾಗಿದ್ದ ಪೊಲೀಸರಿಗೆ ಇತ್ತ ಜನರನ್ನ ನಿಯಂತ್ರಿಸುವುದು ತಲೆ ನೋವಾಗಿತ್ತು. ಆಗಾಗ್ಗೆ ಲಾಠಿ ಬೀಸಿ ಜನರನ್ನ ಚದುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement