ಬಾಳೆ ಗೊನೆಯ ಬಂಚ್ ಫೀಡಿಂಗ್ ಪ್ರಾತ್ಯಕ್ಷಿಕೆ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭೂಚೇತನ ಯೋಜನೆಯಡಿ ತುರುವೇಕೆರೆ ತಾಲೂಕಿನ ರೈತ ಅನುವುಗಾರರಿಗೆ ಒಂದು ವಾರದ ತರಬೇತಿ ಕಾರ್ಯಕ್ರಮದ ನಾಲ್ಕನೇ ದಿನದಂದು ಬಾಳೆ ಗೊನೆಯ ಬಂಚ್ ಫೀಡಿಂಗ್ ಕುರಿತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ತೋಟಗಾರಿಕೆ ವಿಷಯ ತಜ್ಞರಾದ ಡಾ.ನಾಗಪ್ಪದೇಸಾಯಿ ಮಾತನಾಡಿ ಗೊನೆಯ ಕಾಯಿಗಳು ಕಚ್ಚಿದ ನಂತರ ಗೊನೆಯ ತುದಿಯಲ್ಲಿರುವ ಗಂಡು ಹೂ ಭಾಗವನ್ನು ಕತ್ತರಿಸಿ, ನಂತರ ರೋಬಸ್ಟಾ ಬಾಳೆಯ ಪ್ರತಿ ಗೊನೆಗೆ 200 ಗೇಜ್ನ 15್ಗ25 ಸೆ.ಮೀ. ಅಳೆತೆಯ ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ಕಿ.ಗ್ರಾಂ. ತಾಜಾ ಸಗಣಿ, 100 ಮಿ.ಲೀ.ನೀರು, 7.5 ಗ್ರಾಂ. ಯೂರಿಯಾ ಮತ್ತು 7.5.ಗ್ರಾಂ ಸಲ್ಫೇಟ್ ಆಫ್ ಪ್ಯೊಟ್ಯಾಷ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ಬಾಳೆ ಗೊನೆಯ ತುದಿಯ ದಿಂಡನ್ನು ಚೀಲದಲ್ಲಿ ಮುಳುಗಿಸಿ ನೈಲಾನ್ ಅಥವಾ ಪ್ಲಾಸ್ಟಿಕ್ ದಾರದಿಂದ ಚೀಲವನ್ನು ಭದ್ರವಾಗಿ ಕಟ್ಟಬೇಕು. ಗ್ರಾಂಡ್ನಚೈನ್ ಜಿ-9 ಬಾಳೆಗೆ ಅರ್ಧ ಕಿ.ಗ್ರಾ. ತಾಜಾ ಸಗಣಿ, 100 ಮಿ.ಲೀ.ನೀರು, 10 ಗ್ರಾಂ ಯೂರಿಯಾ ಮತ್ತು 10 ಗ್ರಾಂ ಸಲ್ಫೇಟ್ ಆಫ್ ಪೋಟ್ಯಾಷ್ ಸಾಕು. ಏಲಕ್ಕಿ ಬಾಳೆಗೆ ಅರ್ಧ ಕಿ.ಗ್ರಾಂ. ತಾಜಾ ಸಗಣಿ, 100 ಮಿ.ಲೀ.ನೀರು, 2.5 ಗ್ರಾಂ ಯೂರಿಯಾ ಮತ್ತು 2.5 ಗ್ರಾಂ ಸಲ್ಫೇಟ್ ಆಫ್ ಪೋಟ್ಯಾಷ್ ಸಾಕಾಗುತ್ತದೆ. ಈ ವಿಧಾನದಲ್ಲಿ ಪ್ರತಿ ಗೊನೆಗೆ ರು. 1ರಿಂದ 2 ಖರ್ಚು ತಗಲುತ್ತದೆ. ಇದರಿಂದ ಎಲಕ್ಕಿ ಬಾಳೆಯಲ್ಲಿ 2-3 ಕಿ.ಗ್ರಾಂ ರೋಬಸ್ಟಾ ಹಾಗೂ ಗ್ರಾಂಡ್ ಚೈನ್ ತಳಿಯಲ್ಲಿ 3-5 ಕಿ.ಗ್ರಾಂ ಗೊನೆಯ ತೂಕ ಹೆಚ್ಚುವುದು ಎಂದು ತಿಳಿಸಿದರು.
ಕೇದ್ರದ ವಿಸ್ತರಣೆ ವಿಷಯ ತಜ್ಞ ಡಾ.ಎಂ.ಹೆಚ್.ಶಂಕರ ಇಂತಹ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭಗಳಿಸಬಹುದು ಎಂದರು.