ಬಿಗನೇನಹಳ್ಳಿ ಗ್ರಾಮದಲ್ಲಿ ಅನ್ನಭಾಗ್ಯ ಪ್ರಾರಂಭ
ತುರುವೇಕೆರೆ: ತಾಲೂಕಿನ ಬಿಗನೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನ ಭಾಗ್ಯ ಯೋಜನೆಯನ್ನು ಪ್ರಾರಂಭ ಮಾಡಲಾಯಿತು. ಅರಮಲ್ಲೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಗನೇನಹಳ್ಳಿಯಲ್ಲಿ ಪಂಚಾಯ್ತಿಯ ಅಧ್ಯಕ್ಷ ಗಂಗಾಧರೇಶ್ ಬಿಪಿಎಲ್ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಆಹಾರ ನಿರೀಕ್ಷಕರಾದ ಶಿವಶಂಕರ್, ಗ್ರಾಮ ಪಂಚಾಯ್ತಿ ಸದಸ್ಯ ರವೀಂದ್ರ ಕುಮಾರ್, ಮಮತಾ ಚಂದ್ರಶೇಖರ್, ತಮ್ಮಣ್ಣಗೌಡ, ಗ್ರಾಮದ ಮುಖ್ಯಸ್ಥರಾದ ಬಿ.ಲಕ್ಷ್ಮಣಗೌಡ, ಪುರುಷೋತ್ತಮ್ ಇದ್ದರು.
ತಿಂಗಳಿಗೆ 8696 ಕ್ವಿಂಟಾಲ್ ಅಕ್ಕಿ: ಪ್ರತಿ ತಿಂಗಳು ಅಂತ್ಯೋದಯ, ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಪಡಿತರ ಅಂಗಡಿಗಳ ಮೂಲಕ ವಿತರಣೆ ಮಾಡುವ ಅಕ್ಕಿ ಸುಮಾರು 8696 ಕ್ವಿಂಟಾಲ್ ಆಗುತ್ತದೆ ಎಂದು ತಹಸೀಲ್ದಾರ್ ಜಿ.ಪಿ.ಮಂಜೇಗೌಡ ತಿಳಿಸಿದ್ದಾರೆ. ಪ್ರತಿ ತಿಂಗಳು ಅಂತ್ಯೋದಯಕ್ಕೆ 3233 ಕಾರ್ಡ್ದಾರರು, 10 ಕೆಜಿ ಪಡೆಯುವವರು 1167, 20 ಕೆ ಜಿ ಪಡೆಯುವವರು 2318 ಹಾಗೂ 30 ಕೆಜಿ ಪಡೆಯುವವರು 23820 ಕಾರ್ಡ್ದಾರರಿದ್ದಾರೆ ಎಂದು ತಿಳಿಸಿದ್ದಾರೆ. ಅಂತ್ಯೋದಯ ಕಾರ್ಡ್ದಾರರಿಗೆ ತಲಾ ಕೆಜಿಗೆ 1ರು.ನಂತೆ 29 ಕೆಜಿ ಅಕ್ಕಿ, 2 ರು. ದರದಲ್ಲಿ 6 ಕೆಜಿ ಗೋಧಿಯನ್ನು ನೀಡಲಾಗುವದು ಎಂದು ತಿಳಿಸಿದ್ದಾರೆ. ಜು. 10 ರಿಂದಲೇ ಯೋಜನೆ ಜಾರಿಯಲ್ಲಿದ್ದು ಸಾರ್ವಜನಿಕರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.