ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಳೇ ಲೋಗೋ ಸ್ಥಾಪಿಸಿ, ಹೊಸ ವಿಸಿ ನೇಮಿಸಿ

Rashmi Kasaragodu
Updated On : 17 Jul 2013, 12:15 pm

ಕ.ಪ್ರ.ವಾರ್ತೆ   ತುಮಕೂರು   ಜು. 16
ತುಮಕೂರು ವಿವಿ ಮಾಜಿ ಕುಲಪತಿ ಡಾ.ಎಸ್. ಸಿ. ಶರ್ಮ ನಿವೃತ್ತಿಯ ನಂತರ ವಿವಿ ನಿಗೂಢ ಕಾರ್ಯವೈಖರಿ, ಅದ್ವಾನಗಳ ವಿರುದ್ಧ ಅಲ್ಲೊಂದು - ಇಲ್ಲೊಂದು ಧನಿ ಕೇಳಿ ಬರುತ್ತಿದೆ. ಡಾ.ಎಸ್. ಸಿ. ಶರ್ಮರ ಕಾರ್ಯವೈಖರಿ ಕುರಿತು ಪ್ರಗತಿಪರ ಸಂಘಟನೆಗಳು ಹಾಗೂ ಎಸ್ಎಫ್ಐ ನಂತಹ ವಿದ್ಯಾರ್ಥಿ ಸಂಘಟನೆಗಳು ಕಳೆದ 4 ವರ್ಷಗಳಿಂದ ನಿರಂತರವಾಗಿ ಪ್ರತಿಭಟಿಸಿದ್ದನ್ನು ಬಿಟ್ಟರೆ, ಯಾರೊಬ್ಬರೂ ಚಕಾರವೆತ್ತಿರಲಿಲ್ಲ. ಇದಕ್ಕೆ ವಿರೋಧ ಪಕ್ಷಗಳಾಗಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್, ಅಂದಿನ ಆಡಳಿತಾರೂಢ ಬಿಜೆಪಿ ಕೂಡ ಹೊರತಾಗಿರಲಿಲ್ಲ. ಶರ್ಮ ನಿವೃತ್ತಿಯ ನಂತರ ಇದೀಗ ಅವರ ಕಾರ್ಯವೈಖರಿ, ಅದ್ವಾನಗಳ ಕುರಿತಂತೆ ಇದೇ ಮೊದಲ ಬಾರಿಗೆ ಅಹಿಂದ ಹಾಗೂ ಕಾಂಗ್ರೆಸ್ ಮುಖಂಡ, ಇಂದಿರಾ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಸಿ. ಶಿವಮೂರ್ತಿ ಸುದ್ದಿಗೋಷ್ಠೀಯಲ್ಲಿ ಸೊಲ್ಲೆತ್ತಿದ್ದಾರೆ.
ತುಮಕೂರು ವಿವಿ ನಿಗೂಢ ಕಾರ್ಯವೈಖರಿ, ಪಾರದರ್ಶಕತೆಯಿಲ್ಲದ ಆಡಳಿತ, ಹಳೇ ಲೊಗೋ ಸದ್ದಿಲ್ಲದೆ ಬದಲಿಸಿದ್ದು, ವಿದ್ಯಾರ್ಥಿಗಳ ವಿರುದ್ಧ ವಿನಾ ಕಾರಣ ಕೇಸು ದಾಖಲಿಸಿದ್ದು, ಸ್ನಾತಕೋತ್ತರ ಹಾಗೂ ಪದವಿ ಹಂತದಲ್ಲಿ ಏಕಾಏಕಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದು ಸೇರಿದಂತೆ ಇತರೆ ವಿಷಯಗಳ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸಮಯ ಸಂದರ್ಭ ಬಂದಾಗ ತುಮಕೂರು ವಿವಿ ಕಾನೂನು ಬಾಹಿರ ಚಟುವಟಿಕೆಗಳ, ಅದ್ವಾನಗಳ ಕುರಿತಂತೆ ಸೊಲ್ಲೆತ್ತಿದ್ದೇನೆ. ಆದರೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಪ್ರತಿಭಟನಾಕಾರರ ಹಿಂದೆ ನಿಂತು ಕೆಲಸ ಮಾಡಿದ್ದೇನೆ. ನನ್ನಿಂದಲೂ ತಪ್ಪಾಗಿರಬಹುದು ಎಂದು ತಿಳಿಸಿದರು.
ಹಳೇ ಲೋಗೋ ಮರುಸ್ಥಾಪಿಸಿ: ತುಮಕೂರು ವಿವಿ ಮಾಜಿ ಕುಲಪತಿ ಡಾ.ಎಸ್.ಸಿ. ಶರ್ಮ ಅವರ ಕಾರ್ಯವೈಖರಿ ಕುರಿತು ಶಿವಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ಶರ್ಮ ಯಾರ ಅಭಿಪ್ರಾಯವನ್ನೂ ಪಡೆಯದೆ, ಸದ್ದಿಲ್ಲದೆ ಜಿಲ್ಲೆಯ ಸಾಂಸ್ಕೃತಿಕತೆ ಪ್ರತಿನಿಧಿಸುತ್ತಿದ್ದ ಲೋಗೋ ಬದಲಿಸಿದ್ದು ತಪ್ಪು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೊಸ ಲೋಗೋ ಬದಲಿಸಿ, ಕೂಡಲೇ ಹಳೇ ಲೋಗೋ ಮರುಸ್ಥಾಪಿಸುವಂತೆ ಒತ್ತಾಯಿಸುವುದಾಗಿಯೂ ಭರವಸೆ ನೀಡಿದರು. ಸೀಟು ಹೆಚ್ಚಳಕ್ಕೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಿದ್ದು ಸರಿಯಲ್ಲ, ವಿವಿ ನೇಮಕಾತಿ ಸಂದರ್ಭದಲ್ಲಿ ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆಯಿಲ್ಲದೆ ಆಡಳಿತ ನಡೆಸಿರುವುದು ಸರಿಯಲ್ಲ ಎಂದು ಶಿವಮೂರ್ತಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೊಸ ವಿಸಿ ಬೇಗ ನೇಮಿಸಿ: ತುಮಕೂರು ವಿವಿ ಕುಲಪತಿಯಿಲ್ಲದೆ ಒಂದೂವರೆ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಕೂಡಲೇ ದಕ್ಷ ಕುಲಪತಿಯೊಬ್ಬರನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ವಿವಿ ಕಾರ್ಯಯೋಜನೆಗಳ ವಿಸ್ತರಣೆ ಬಗ್ಗೆ ಪೂರ್ಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಕುಲಪತಿ ನೇಮಕ ತುರ್ತಾಗಿ ಆಗಬೇಕಾಗಿದೆ. ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗಗಳಿಗೆ ಪ್ರಾಧ್ಯಾಪಕರು  ಮತ್ತು ಸಹ ಪ್ರಾಧ್ಯಾಪಕರುಗಳನ್ನು ನೇಮಿಸಿ, ಸಂಶೋಧನಾ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ. ಬೋಧಕೇತರ ಸಿಬ್ಬಂದಿ ಕೊರತೆ ನೀಗಿಸಿ, ಸಮಸ್ಯೆ ಪರಿಹರಿಸಬೇಕಿದೆ ಎಂದರು.
ಹೊಸ ಕ್ಯಾಂಪಸ್ ಅಭಿವೃದ್ಧಿಪಡಿಸಬೇಕಿದೆ: ತುಮಕೂರು ವಿಶ್ವ ವಿದ್ಯಾಲಯಕ್ಕೆ ಹೊಸ ಕ್ಯಾಂಪಸ್ ಅಭಿವೃದ್ಧಿಪಡಿಸಬೇಕಾಗಿದೆ. ಮತ್ತಷ್ಟು ಅಗತ್ಯವಾದ ಜಾಗವನ್ನು ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿವೃತ್ತ ಕೆಇಬಿ ಅಧಿಕಾರಿ ಗೋಪಿನಾಥ್, ಎಂ.ಬಿ. ಕೃಷ್ಣ, ಪ್ರೊ. ಕೃಷ್ಣಮೂರ್ತಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement