ಆದಾಯ ಮಿತಿ ಏರಿಕೆಗೆ ಬಿಎಸ್ಪಿ ಖಂಡನೆ
ಚಿಕ್ಕನಾಯಕನಹಳ್ಳಿ: ಹಿಂದುಳಿದ ವರ್ಗಗಗಳ ಆದಾಯ ಮಿತಿ ಏರಿಕೆಯನ್ನು ಹೆಚ್ಚಿಸಿರುವ ಮುಖ್ಯಮಂತ್ರಿಯವರ ಕ್ರಮವನ್ನು ರಾಜ್ಯ ಬಿಎಸ್ಪಿ ಪ್ರಧಾನಕಾರ್ಯದರ್ಶಿ ಕ್ಯಾಪ್ಟನ್ ಸೋಮಶೇಖರ್ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿಂದುಳಿದ ವರ್ಗಗಳ ಆದಾಯ ಮಿತಿ ಹೆಚ್ಚಿಸಿರುವ ಸರ್ಕಾರದ ನಿರ್ಧಾರದಿಂದ ಬಡಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ. ಈಗ ಸಿದ್ದರಾಮಯ್ಯನವರು ಬಹುಸಂಖ್ಯಾತ ಹಿಂದುಳಿದ ವರ್ಗಗಳ ವಾಸ್ತವ ಸ್ಥಿತಿ ಅರಿಯದೆ ನಗರ ಮತ್ತು ಪಟ್ಟಣಗಳಲ್ಲಿ ಅಧಿಕಾರವೆಂಬ ದಂತಗೊಪುರದಲ್ಲಿ ಕುಳಿತಿರುವ ಬಿಳಿಯಾನೆಯಂತಹ ಬೆರಳೆಣಿಕೆಯಷ್ಟು ಅಧಿಕಾರಿಗಳ ಮಾತಿಗೆ ಮಣಿದು ಆದಾಯ ಮಿತಿ ಹೆಚ್ಚಿಸಿರುವುದು ಗ್ರಾಮೀಣ ಭಾಗದ ಅಸಂಖ್ಯಾತ ಬಡ ವಿದ್ಯಾವಂತ ಯುವಕರ ಬದುಕನ್ನು ಕಸಿಕೊಂಡಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಿರ್ಧಾರ ಅಸಂಖ್ಯಾತ ಹಿಂದುಳಿದ ವರ್ಗಕ್ಕೆ ಮಾಡಿದ ದೊಡ್ಡಮಟ್ಟದ ಅನ್ಯಾಯ ಎಂದು ಅವರು ಹೇಳಿದ್ದಾರೆ.
ನೂತನ ಕಟ್ಟಡದ ಉದ್ಘಾಟನೆ
ಮಧುಗಿರಿ: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಪಟ್ಟಣದ ಗೌರಿಬಿದನೂರು ರಸ್ತೆಯ ಮಹಾತ್ಮಗಾಂಧಿ ಬಡಾವಣೆಯಲ್ಲಿ ಕಟ್ಟಿಸಿರುವ ನೂತನ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಜು.20ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೂತನ ಕಟ್ಟಡ ಉದ್ಘಾಟಿಸುವರು. ಶಾಸಕ ಕೆ.ಎನ್.ರಾಜಣ್ಣ ಕಾರ್ಯಕ್ರಮಕ್ಕೆ ಚಾಲನ ನೀಡುವರು. ಸಂಸದ ಜಿ.ಎಸ್.ಬಸವರಾಜು ಹಿಂದು ಸಾದರ ನೌಕರರ ಸಂಘ ಉದ್ಘಾಟಿಸುವರು. ಬೆಂಗಳೂರು ಕೇಂದ್ರ ಸಂಘದ ಅಧ್ಯಕ್ಷ ಡಿ.ರಾಮಯ್ಯ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಡಾ.ಶಿವಯೋಗಿ ಸ್ವಾಮಿ, ಸಮಾಜ ಸೇವಕಿ ಪದ್ಮ, ಮುಖ್ಯಮಂತ್ರಿ ಚಂದ್ರು ,ಮುಖ್ಯ ಅತಿಥಿ ಎ.ಡಿ.ಬಲರಾಮಯ್ಯ, ಟಿ.ಎನ್.ನರಸಿಂಹಮೂರ್ತಿ, ಎ.ಎಂ.ರಾಮಮೂರ್ತಿ, ರವಿಕುಮಾರ್ ಇನ್ನು ಅನೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘದ
ಪ್ರಾರಂಭೋತ್ಸವ
ಮಧುಗಿರಿ: ಇಲ್ಲಿನ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಜು.20 ರಂದು ಬೆಳಿಗ್ಗೆ 9 ಗಂಟೆಗೆ ವಿದ್ಯಾರ್ಥಿ ಸಂಘದ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದೆ. ಎಂ.ಜಿ.ಎಂ.ನ್ಯಾಷನಲ್ ಸೊಸೈಟಿ ಉಪಾಧ್ಯಕ್ಷ ಎಚ್.ಕೆ.ವಿ.ರೆಡ್ಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿ ಬೆಂಗಳೂರು ಕರ್ನಾಟಕ ಜುಡಿಷಿಯಲ್ ಅಕಾಡೆಮಿ ಡೆಪ್ಯೂಟಿ ಡೈರಕ್ಟರ್ ಎಚ್.ಆರ್.ರಾಧ, ಸಂಸ್ಥೆಯ ಖಜಾಂಚಿ ಡಿ.ಜಿ.ಶಂಕರನಾರಾಯಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯದರ್ಶಿ ಎಂ.ಎಸ್. ಶಂಕರನಾರಾಯಣ ಪ್ರತಿಭಾಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸುವರು.