ಗ್ರಾಮೀಣ ಅಂಚೆಪಾಲಕ ಹುದ್ದೆ ನೇಮಕಾತಿಯಲ್ಲಿ ಲೋಪ ದೋಷ
ಕ.ಪ್ರ. ವಾರ್ತೆ ಕುಣಿಗಲ್ ಜು.16
ಹುತ್ರಿಗ್ರಾಮದ ವ್ಯಾಪ್ತಿಯಲ್ಲಿ ಗ್ರಾಮೀಣ ಅಂಚೆಪಾಲಕ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ, ಸಾಕಷ್ಟು ಲೋಪ, ದೋಷ ಕಂಡುಬಂದ ಹಿನ್ನೆಲೆಯಲ್ಲಿ, ಅಕ್ರಮ ಎಸಗಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ನೇಮಕಾತಿ ಪ್ರಕ್ರಿಯೆ ಹೊಸದಾಗಿ ಪ್ರಾರಂಭಿಸುವಂತೆ ಹುತ್ರಿ ಗ್ರಾಮಸ್ಥರು ಅಂಚೆನಿರೀಕ್ಷಕರೊಂದಿಗೆ ಸೋಮವಾರ ಸಂಜೆ ವಾಗ್ವಾದ ನಡೆಸಿದರು.
ತಾಲೂಕಿನ ಹುತ್ರಿ,ಎಲೆಕಡಕಲು, ಕೊಪ್ಪ ಗ್ರಾಮಗಳಲ್ಲಿ ಖಾಲಿ ಇರುವ ಗ್ರಾಮಾಂತರ ಗ್ರಾಮೀಣ ಅಂಚೆಪಾಲಕ ಹುದ್ದೆಗೆ ಕಳೆದ ಜೂನ್ 10 ರಂದು ನೇಮಕಾತಿ ಪ್ರಕ್ರಿಯೆ ತುಮಕೂರು ಅಂಚೆ ಅಧೀಕ್ಷಕರ ಕಾರ್ಯಾಲಯದಿಂದ ಪ್ರಕಟಣೆ ಹೊರಬಿತ್ತು. ಜುಲೈ 9ರೊಳಗೆ ನೋಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ನಿಯಮಾವಳಿಗಳ ಪ್ರಕಾರ ನೇಮಕಾತಿ ಪ್ರಕಟಣೆಯನ್ನು ಆಯಾ ಗ್ರಾಪಂ ಅಧ್ಯಕ್ಷರು, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೋಂದಾಯಿತ ಅಂಚೆ ಮೂಲಕ ಮತ್ತು ವ್ಯಾಪ್ತಿಯ ಉಪಅಂಚೆ ಕಚೇರಿಯ ಸೂಚನಾ ಫಲಕದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮಾಹಿತಿಗೆ ಪ್ರಕಟಿಸಬೇಕಿತ್ತು.
ಕಂಗಾಲಾದ ಆಕಾಂಕ್ಷಿಗಳು: ಕೆಂಪನಹಳ್ಳಿ ಗ್ರಾಪಂ ವ್ಯಾಪ್ತಿಯ ಹುತ್ರಿ ಗ್ರಾಮದ ಹುದ್ದೆಗೆ, ಗ್ರಾಮದ ಹಲವು ಯುವಕರು ಆಕಾಂಕ್ಷಿಗಳಾಗಿದ್ದರಲ್ಲದೆ ಗ್ರಾಮೀಣ ಅಂಚೆಪಾಲಕ ಹುದ್ದೆಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಬೀಳುತ್ತದೆಯೆ ಎಂದು ಕಾಯುತ್ತಿದ್ದು ಗ್ರಾಪಂ ಕಚೇರಿ, ಸರ್ಕಾರಿ ಶಾಲೆ ಹಾಗೂ ಸಮೀಪದ ಅಂಚೆ ಕಚೇರಿಗೆ ಎಡತಾಕುತ್ತಲೆ ಇದ್ದರು. ಆದರೆ ಯಾವುದೇ ಮಾಹಿತಿಯು ದೊರಕದೆ ಕಂಗಾಲಾದ ಆಕಾಂಕ್ಷಿಗಳು, ಕುಣಿಗಲ್ ಅಂಚೆ ಕಚೇರಿಗೆ ಇದೆ 10ನೇ ತಾರೀಕಿನಂದು ಆಗಮಿಸಿದರು. ವಿಚಾರಿಸಿದಾಗ ಜೂನ್ 10ರಲ್ಲೆ ಪ್ರಕಟಣೆ ಹೊರಡಿಸಲಾಗಿದ್ದು, 9ನೇ ತಾರೀಕು ಕಡೆಯ ದಿನವಾಗಿದೆ ಎಂದು ಮಾಹಿತಿ ನೀಡಿದ ಮೇರೆಗೆ ಆತಂಕಗೊಂಡ ಹುದ್ದೆ ಆಕಾಂಕ್ಷಿಗಳು, ಹುತ್ರಿಗ್ರಾಮಕ್ಕೆ ಆಗಮಿಸಿ, ಗ್ರಾಮೀಣ ಅಂಚೆಪಾಲಕ ಹುದ್ದೆ ಸಂಬಂಧಿಸಿದಂತೆ ಅಂಚೆ ಇಲಾಖೆಯಿಂದ ಬಂದಿರುವ ಮಾಹಿತಿಗಳ ಬಗ್ಗೆ ಕಲೆಹಾಕಿದರು. ಸರ್ಕಾರಿ ಶಾಲೆಗೆ ನೋಂದಾಯಿತ ಅಂಚೆ ಜುಲೈ 11ಕ್ಕೆ ಬಂದಿದ್ದು, ದಾಖಲೆಗಳಲ್ಲಿ ಬಟವಾಡೆ ಆಗಿರುವ ದಿನಾಂಕ ತಿದ್ದಿದ್ದರೆ, ಗ್ರಾಪಂ ಅಧ್ಯಕ್ಷೆಯ ಗಮನಕ್ಕೆ ಬಾರದಂತೆ ಅವರ ಸಹಿ ಪೋರ್ಜರಿ ಮಾಡಿ, ಗ್ರಾಪಂ ಮುದ್ರೆ ಹಾಕಿರುವ ದಾಖಲೆಗಳು ಕಂಡುಬಂದವು. ವಿಷಯವನ್ನು ಹುದ್ದೆ ಆಕಾಂಕ್ಷಿಗಳು ಗ್ರಾಪಂ ಸದಸ್ಯ ಹುತ್ರಿಶಿವರಾಮ, ಮುಖಂಡರಾದ ರಂಗಸ್ವಾಮಿ, ಕುಮಾರ್ ಇತರರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಗ್ರಾಮಸ್ಥರು, ಹುತ್ರಿದುರ್ಗ ಗ್ರಾಪಂ ಅಧ್ಯಕ್ಷೆ ರೇಣುಕಮ್ಮನವರನ್ನು ಕೇಳಿದರು. ಅವರು ತಮ್ಮ ಸಹಿ ಪೋರ್ಜರಿಯಾಗಿದೆ ಎಂದು ಬರೆದುಕೊಟ್ಟಿದ್ದು, ಆ ದಾಖಲೆಯ ನಂತರ ಶಾಲಾ ಮುಖ್ಯೋಪಾಧ್ಯಾಯರು ಸಹ ತಮಗೆ ಅಂಚೆ ತಡವಾಗಿ ಬಂದಿದ್ದರೂ, ದಿನಾಂಕ ತಪ್ಪಾಗಿ ನಮೂದಿಸಿರುವ ಬಗ್ಗೆ ವಿವರವನ್ನು ಬರೆದುಕೊಟ್ಟರು. ಕೆಂಪನಹಳ್ಳಿ ಉಪಅಂಚೆ ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಸೋಮವಾರ ಸಂಜೆ ಆರು ಗಂಟೆಗೆ ಪಟ್ಟಣದ ಅಂಚೆ ಕಚೇರಿಯ ಅಂಚೆ ನಿರೀಕ್ಷಕ ಚಂದ್ರನಾಯಕ್ರನ್ನು ಭೇಟಿ ಮಾಡಿ ವಾಗ್ವಾದ ನಡೆಸಿದರು.
ತರಾಟೆಗೆ: ಅವೈಜ್ಞಾನಿಕವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮಾಡಿರುವುದನ್ನು ಪ್ರಶ್ನಿಸಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರಲ್ಲದೆ, ಗ್ರಾಪಂ ಅಧ್ಯಕ್ಷರ ಫೋರ್ಜರಿ ಸಹಿ, ಅಂಚೆದಾಖಲೆಗಳಲ್ಲಿ ತಿದ್ದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮಿನಿಲ್ ಪ್ರಕರಣ ದಾಖಲಿಸದೆ ಇದ್ದಲ್ಲಿ, ಕೆಂಪನಹಳ್ಳಿ ಅಂಚೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಚಂದ್ರನಾಯಕ್ ಈ ಕುರಿತು ವರದಿ ಸಂಗ್ರಹಿಸಿ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದು, ನೇಮಕಾತಿ ಪ್ರಕ್ರಿಯೆಗೆ ಕಾಲವಕಾಶ ಕೊಡಿಸುವ ಭರವಸೆ ನೀಡಿದ ಮೇರೆಗೆ, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಗ್ರಾಮಸ್ಥರು ಹೊರನಡೆದರು.