ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮರಳು ಗಣಿಗಾರಿಕೆ ತಕ್ಷಣ ನಿಲ್ಲಿಸಿ

Rashmi Kasaragodu
Updated On : 18 Jul 2013, 12:48 pm

ಕ.ಪ್ರ. ವಾರ್ತೆ   ಶಿರಾ   ಜು.14
ಮರಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ತಾಲೂಕಿನ ಗೌಡಗೆರೆ ಹೋಬಳಿಯ ಹೇರೂರು, ಮುದ್ದೇನಹಳ್ಳಿ ಹಾಗೂ ಹೊಸೂರು ಗ್ರಾಮಸ್ಥರು ಸುವರ್ಣಮುಖಿ ನದಿಯ ಬಳಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಹಲವು ಮುಖಂಡರು ಮರಳು ಗಣಿಗಾರಿಕೆ ನಡೆಯುತ್ತಿರುವ ಈ ಭಾಗವು ತೀವ್ರ ಹಾಗೂ ಸತತ ಬರಗಾಲಕ್ಕೆ ತುತ್ತಾಗಿದ್ದು ಕೃಷಿ ಚಟುವಟಿಕೆಗಳು ನಿಂತು ಹೋಗಿವೆ.
ಮರಳು ಗಣಿಗಾರಿಕೆ ಮಾಡುವುದರಿಂದ ಅಂತರ್ಜಲ ಬತ್ತಿ ಹೋಗಿ ಕೊಳವೆಬಾವಿಗಳಲ್ಲಿಯೂ ಸಹ ನೀರು ಸಿಗುತ್ತಿಲ್ಲ. ಸಾಲ ಮಾಡಿ  ಬೋರ್ಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರಾವರಿಯನ್ನೇ ಅವಲಂಬಿಸಿದ್ದ
ತೋಟಗಳು ಒಣಗಿ ಹೋಗುತ್ತಿದ್ದು ಕುಡಿಯಲು ನೀರು ಕೂಡ ಸಿಗದೆ ಜನ ಜಾನುವಾರುಗಳು ಪರಿತಪಿಸುವಂತಾಗಿದೆ. ಸಾಲ ಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರು ಸಿಗುತ್ತಿಲ್ಲ:  ಮರಳು ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಜಿಲ್ಲಾ ಪಂಚಾಯ್ತಿ ವತಿಯಿಂದ  33 ಲಕ್ಷ ರು.ಗಳನ್ನು ಖರ್ಚು ಮಾಡಿದರೂ ಅಂತರ್ಜಲ ಬತ್ತಿ ಹೋಗಿ ನೀರು ಸಿಗುತ್ತಿಲ್ಲ. ಮರಳು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಲ್ಲಿ ಈಗಾಗಲೇ 3 ರಿಂದ 4 ಮೀಟರ್ ಆಳದವರೆಗೆ ಮರಳನ್ನು ತೆಗೆಯಲಾಗಿದ್ದು ಮತ್ತೆ ಇದೇ ಸ್ಥಳದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅವೈಜ್ಞಾನಿಕ ತೀರ್ಮಾನವಾಗಿದೆ. ನದಿಯಲ್ಲಿ ನೀರು ಹರಿದು ಸುಮಾರು 10 ವರ್ಷಗಳೇ ಆಗಿ ಹೋಗಿದೆ. ನೀರು ಹರಿಯುತ್ತಿದ್ದರೆ ಮರಳು ಬರುತ್ತಿತ್ತು. ಆಗ ಯಾರು ಕೇಳುತ್ತಿರಲಿಲ್ಲ. ಈಗಾಗಲೇ ನದಿಯಿಂದ ಸಾಕಷ್ಟು ಮರಳು ತೆಗೆದಿದ್ದು ನದಿಯ ತುಂಬ ಗುಂಡಿಗಳೇ ಇವೆ. ಮರಳು ಇಲ್ಲವಾದಲ್ಲಿ ನೀರು ಇಂಗುವುದಿಲ್ಲ. ಇದರಿಂದ ಅಂತರ್ಜಲ ಬತ್ತಿ ಹೋಗುತ್ತದೆ. ಯಾರೋ ಗುತ್ತಿಗೆದಾರರ ಹಿತಕ್ಕಾಗಿ ರೈತರು ಬೀದಿಗೆ ಬೀಳಬೇಕಾಗಿದೆ. ಸರ್ಕಾರ ಈ ಕೂಡಲೇ ಮರಳು ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸುತ್ತೇವೆ ಎಂದರು.
ಉಗ್ರಹೋರಾಟ: ಒಂದು ವೇಳೆ ನಮ್ಮ ಮನವಿ ಪುರಸ್ಕರಿಸಿ ಗಣಿಗಾರಿಕೆಯನ್ನು ನಿಲ್ಲಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಹಲವು ಗ್ರಾ.ಪಂ. ಸದಸ್ಯರು ಮಹಿಳೆಯರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಸ್ಥಳದಲ್ಲಿ ನಗರ ಠಾಣಾ ಸಿಪಿಐ ಪ್ರಹ್ಲಾದ್, ತಾವರೆಕೆರೆ ಠಾಣಾಧಿಕಾರಿ ನಯಾಜ್ ಬೇಗ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement