20ರಂದು ಬಿಜೆಪಿ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ
ತುಮಕೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿರುವ ಬಿಜೆಪಿಗೆ ಚೈತನ್ಯ ಮೂಡಿಸುವ ಸಲುವಾಗಿ ಹೊಸ ಪದಾಧಿಕಾರಿಗಳ ನೇಮಿಸಲು ಕ್ಷಣಗಣನೆ ಆರಂಭವಾಗಿದೆ.
ಇನ್ನು ಎರಡು ದಿವಸದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಾದಿಯನ್ನು ಯಾರು ಅಲಂಕರಿಸುತ್ತಾರೆ ಎಂಬುದಕ್ಕೆ ಉತ್ತರ ಸಿಗಲಿದೆ. ಈಗಾಗಲೇ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ, ಮಾಜಿ ಶಾಸಕ ಬಿ.ಸಿ. ನಾಗೇಶ್ ಸೇರಿ 9 ಮಂದಿ ಈ ಹುದ್ದೆಯ ರೇಸ್ನಲ್ಲಿ ಇದ್ದಾರೆ.
ಕಳೆದ 6 ತಿಂಗಳ ಹಿಂದೆಯೇ ಹಾಲಿ ಅಧ್ಯಕ್ಷ ಶಿವಪ್ರಸಾದ್ ಅಧಿಕಾರಿ ಮುಗಿದಿದೆ. ಚುನಾವಣೆ ಹಿನ್ನೆಲೆಯಲ್ಲಿ ಅವರನ್ನೆ ಮುಂದುವರಿಸಲಾಗಿತ್ತು. ಈಗ ಪಕ್ಷದಲ್ಲಿ ಜಿಲ್ಲಾ ಘಟಕಗಳ ಪುನಾರಚನೆ ಕೈಗೊಳ್ಳಲಾಗಿದೆ. ಸ್ಥಾನೀಯ ಹಾಗೂ ನಗರಸಭೆಯ ವಾರ್ಡ್ ಮಟ್ಟದಲ್ಲಿ ಮಂಡಲಗಳನ್ನು ರಚಿಸಲಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ನಾಗೇಶ್ರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಹ ವರಿಷ್ಠರು ತೀರ್ಮಾನಿಸುವ ಸಾಧ್ಯತೆಗಳಿವೆ.
ಓಂ ನಮೋ ನಾರಾಯಣ, ಗಂಗರಾಜು, ನಾಗರತ್ನಮ್ಮ, ಸ್ನೇಕ್ ನಂದೀಶ್, ತಿಪ್ಪೇಸ್ವಾಮಿ, ತಿಮ್ಮಪ್ಪ, ಮಲ್ಲಿಕಾರ್ಜುನ ಸಹ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆಗಳಿವೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆ ಆದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಹಾಲಿ ಜಿಲ್ಲಾಧ್ಯಕ್ಷ ಎಸ್.ಶಿವಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲಾ ಕಾರ್ಯದರ್ಶಿ ನಂದೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ, ಓಂ ನಮೋ ನಾರಾಯಣ ಹಾಜರಿದ್ದರು.