ತುಮಕೂರು ವಿವಿಯಲ್ಲಿ ತ್ರಿಪಾತ್ರಾಭಿನಯ!
ಅದಲಗೆರೆ ನಾಗೇಂದ್ರಕುಮಾರ್
ತುಮಕೂರು: ಒಬ್ಬರೇ ವ್ಯಕ್ತಿ ಒಂದೇ ವಿವಿಯಲ್ಲಿ ಮೂರು ಹುದ್ದೆ ನಿಭಾಯಿಸುತ್ತಿರುವುದನ್ನು ಕೇಳಿದ್ದೀರಾ?
ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ತುಮಕೂರು ವಿವಿಯಲ್ಲಿ. ಪ್ರೊ. ಶಿವಲಿಂಗಯ್ಯ ಅವರೇ ತುಮಕೂರು ವಿವಿಯಲ್ಲಿ ಮೂರು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಹಾಲಿ ಪ್ರಭಾರ ಕುಲಪತಿ ಹುದ್ದೆಯ ಜತೆಗೆ ರಿಜಿಸ್ಟ್ರಾರ್ ಹಾಗೂ ವಿಭಾಗವೊಂದರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಭಾರ ಕುಲಪತಿಯಾಗಲು ವಿಭಾಗವೊಂದರ ಡೀನ್ ಆಗಿರಬೇಕು. ಅಷ್ಟೇ ಅಲ್ಲ. ಎಲ್ಲ ವಿಭಾಗಗಳ ಡೀನ್ಗಳಿಗಿಂತ ಹಿರಿಯರಾಗಿರಬೇಕು. ಇದು ಯುಜಿಸಿ ನಿಯಮಾವಳಿ. ಪ್ರೊ. ಶಿವಲಿಂಗಯ್ಯ ಅವರನ್ನು ಪ್ರಭಾರ ಕುಲಪತಿಯನ್ನಾಗಿ ಮಾಡುವ ಉದ್ದೇಶದಿಂದಲೇ ಈ ಹಿಂದೆ ಹಿರಿಯ ಡೀನ್ ಆಗಿದ್ದ ವಿಜ್ಞಾನ ವಿಭಾಗದ ಒಬ್ಬರನ್ನು ರಾಜಿನಾಮೆ ಕೊಡಿಸುವುದರ ಮೂಲಕ ಶಿವಲಿಂಗಯ್ಯ ಅವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪ ಇವೆ. ಜತೆಗೆ ಪ್ರೊ. ಶಿವಲಿಂಗಯ್ಯ ಅವರನ್ನು ಗ್ರಂಥಾಲಯ ವಿಭಾಗದ ಮುಖ್ಯಸ್ಥರು ಹಾಗೂ ಡೀನ್ ಆಗಿ ಹಿಂದಿನ ಸಿಂಡಿಕೇಟ್ ಸಭೆಯಲ್ಲಿ ನೇಮಕ ಮಾಡುವುದರ ಮೂಲಕ ಪ್ರಭಾರ ಕುಲಪತಿಯಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಲಾಯಿತು.
ಈ ಹಿಂದೆ.... ಹಿಂದೆ ವಿವಿ ಸಂಸ್ಥಾಪಕ ಕುಲಪತಿ ಡಾ. ಓ. ಅನಂತರಾಮಯ್ಯ ನಿವೃತ್ತಿಯಾದ ವೇಳೆ ವಿವಿಯ ಹಿರಿಯ ಪ್ರಾಧ್ಯಾಪಕಿ, ವಿವಿಯ ಹಿರಿಯ ಡೀನ್ ಹಾಗೂ ಬಿಎಡ್ ಕಾಲೇಜೊಂದರ ಪ್ರಿನ್ಸಿಪಾಲ್ ಕೂಡ ಆಗಿದ್ದ ಡಾ. ಹೇಮಲತಾ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಿಸಲಾಗಿತ್ತು. ಇದಕ್ಕೆ ಸಿಂಡಿಕೇಟ್ ಸಭೆ ಅನುಮೋದನೆ ಕೂಡ ಪಡೆಯಲಾಗಿತ್ತು. ಆದರೆ, ಈ ಬಾರಿ ಪ್ರೊ. ಶಿವಲಿಂಗಯ್ಯ ಅವರನ್ನು ಪ್ರಭಾರ ಕುಲಪತಿಯಾಗಿ ಮಾಡುವ ಉದ್ದೇಶದಿಂದಲೇ ಇಲ್ಲದ ಡೀನ್ ಹುದ್ದೆ ನಿರ್ಮಿಸಿ, ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.