ನ್ಯಾಯಬೆಲೆ ಅಂಗಡಿ ತೂಕದಲ್ಲಿ ವಂಚನೆ: ಆರೋಪ, ಪ್ರತಿಭಟನೆ
ಕ.ಪ್ರ. ವಾರ್ತೆ ಚಿಕ್ಕನಾಯಕನಹಳ್ಳಿ ಜು.18
ಪಟ್ಟಣದ ಬನಶಂಕರಿ ಬಡಾವಣೆ ಕುರುಬರಹಳ್ಳಿ, ಕೇದಿಗೆಹಳ್ಳಿ, ವಿನಾಯಕನಗರ ಮುಂತಾದ ಪ್ರದೇಶದ ಪಡಿತರದಾರರಿಗೆ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ವಂಚಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರತಿಭಟಿಸಿದರು.
ಪೊಲೀಸ್ ವಸತಿ ಗೃಹಗಳಿಗೆ ಹೊಂದಿಕೊಂಡಂತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ 731 ಪಡಿತರ ಚೀಟಿಗಳನ್ನು ಸಂಯೋಜಿಸಲಾಗಿದೆ. ಈ ಸಂಬಂದ ಎಲ್ಲಾ ಪಡಿತರ ಚೀಟಿಗಳಿಗು ಸಹ ಆಹಾರ ಪದಾಥಂಗಳನ್ನು ಸಮರ್ಪಕವಾಗಿ ಸರ್ಕಾರ ಸರಬರಾಜು ಮಾಡುತ್ತಿದ್ದರು ಸಹ ನ್ಯಾಯಬೆಲೆ ಅಂಗಡಿ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು, ಅನ್ಯಾಯದ ವಿರುದ್ಧ ಪ್ರಶ್ನಿಸಿದರೆ ಪಡಿತರವನ್ನು ಕೊಡದೆ ದಬಾಯಿಸುತ್ತಾರೆ. ಆಗುತ್ತಿರುವ ಅನ್ಯಾಯವನ್ನು ತಹಸೀಲ್ದಾರ್ ಮುಂತಾದ ಮೇಲಧಿಕಾರಿಗಳಿಗೆ ದೂರು ನೀಡುವ ಬಗ್ಗೆ ಯಾರಾದರು ಮಾತನಾಡಿದರೆ ದಬಾಯಿಸುತ್ತಾರೆ ಎಂದು ಜನರು ತಹಸೀಲ್ದಾರ್ ಕಾಮಾಕ್ಷಮ್ಮನವರಲ್ಲಿ ದೂರಿದರು.
ಇದಲ್ಲದೆ ತೂಕದಲ್ಲಿ ಸತತವಾಗಿ ವಂಚಿಸುತ್ತಿದ್ದು, ಕಾರ್ಡಿಗೆ ಹೆಚ್ಚುವರಿ ಹಣ 5 ರು. ಪಡೆಯುವುದರ ಬಗ್ಗೆಯು ಸಹ ಸಾರ್ವಜನಿಕರು ಈ ಸಂದರ್ಭದಲ್ಲಿ ಆರೋಪಿಸಿದರು. ಸ್ಥಳದಲ್ಲಿದ್ದ ತಹಸೀಲ್ದಾರ್ ತೂಕದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಫಲಾನುಭವಿಗೆ ನೀಡಿದ ಪಡಿತರವನ್ನು ಬೇರೆಡೆ ತೂಕಮಾಡಿಸಿದಾಗ ಅರ್ಧ ಕೆ.ಜಿ.ಪಡಿತರ ಕಡಿಮೆಯಿರುವುದು ಪತ್ತೆಯಾಗಿದೆ.
ಇದಲ್ಲದೆ ಅಂಗಡಿ ಮಾಲೀಕರು ತಮಗೆ ಮನಬಂದಾಗ ಅಂಗಡಿ ತೆರೆಯುವುದು ಮಾಮೂಲಿಯಾಗಿದೆ ಎಂದು 7ನೇವಾರ್ಡಿನ ಪುರಸಭಾ ಸದಸ್ಯ ರಾಜಶೇಖರ್ ಮತ್ತು ನಗರ ಬಿಜೆಪಿ ಅಧ್ಯಕ್ಷರಾದ ನಾಗರಾಜು ದೂರಿದರು. ಸಾರ್ವಜನಿಕರ ದೂರುಗಳನ್ನು ಆಲಿಸಿದ ತಹಸೀಲ್ದಾರ್ ಕಾಮಾಕ್ಷಮ್ಮ ಆಹಾರ ಶಿರಸ್ತೇದಾರ್ ಮಂಜುನಾಥ್ ಅವರಿಗೆ ಸಾರ್ವಜನಿಕರ ದೂರಿನ ಮೇರೆಗೆ ಮುಂದಿನ ಕ್ರಮಕೈಗೊಳ್ಳಲು ಸ್ಥಳದಲ್ಲೇ ಸೂಚಿಸಿದರು.