ಬಾರದ ವೈದ್ಯರು; ರೋಗಿಗಳ ಪರದಾಟ
ಕ.ಪ್ರ. ವಾರ್ತೆ ಕುಣಿಗಲ್ ಜು.18
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 11ಗಂಟೆಯಾದರೂ ಸೂಕ್ತ ವೈದ್ಯರಿಲ್ಲದೆ ರೋಗಿಗಳು ಪರದಾಡಿದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ 9 ಗಂಟೆಗೆ ಆಸ್ಪತ್ರೆ ಕೆಲಸದ ಅವಧಿ ಪ್ರಾರಂಭಗೊಂಡಿದ್ದು, ಬೆಳಗ್ಗೆ ಎಂಟು ಗಂಟೆಗೆ ನೂರಾರು ರೋಗಿಗಳು ಕಾಯುತ್ತ ಕುಳಿತಿದ್ದರು. 9 ಗಂಟೆಗೆ ಆಸ್ಪತ್ರೆ ಪ್ರಾರಂಭಗೊಂಡರೂ, ಕೇವಲ ಮಕ್ಕಳ ತಜ್ಞರು ಮಾತ್ರ ಕರ್ತವ್ಯದಲ್ಲಿದ್ದು, ಉಳಿದ ಎಂಟು ಮಂದಿ ಹಾಜರಾಗಿ ಪುಸ್ತಕದಲ್ಲಿ ಸಹಿಹಾಕಿದ್ದ ವೈದ್ಯರು ನಾಪತ್ತೆಯಾಗಿದ್ದರು. ಒಮ್ಮೆಲೆ ಮಕ್ಕಳ ತಜ್ಞರ ಕೊಠಡಿಗೆ ಚಿಕಿತ್ಸೆಗೆ ರೋಗಿಗಳು ನುಗ್ಗಿದ ಕಾರಣ, ಮಕ್ಕಳ ತಜ್ಞರು ತಾವು ಕೇವಲ ಮಕ್ಕಳನ್ನು ಮಾತ್ರ ನೋಡುವುದಾಗಿ ಹೇಳಿದರು. ಬಾಕಿ ಇರುವ ವೈದ್ಯರು ಯಾವಾಗ ಬರುತ್ತಾರೆಂಬ ಪ್ರಶ್ನೆಗೆ ಉತ್ತರ ನೀಡಲು ಯಾರೂ ಇರದ ಕಾರಣ ರೋಗಿಗಳು ಪರದಾಡುವ ಸ್ಥಿತಿ ಉಂಟಾಯಿತು. ಹಣವುಳ್ಳವರು ಖಾಸಗಿ ಆಸ್ಪತ್ರೆಗೆ ತೆರಳಿದರೆ, ಬಡವರು ಆಸ್ಪತ್ರೆಯ ವೈದ್ಯರಿಗೆ ಹಿಡಿಶಾಪ ಹಾಕಿಕೊಂಡು ಕುಳಿತರು. ರೋಗಿಗಳು, ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಚಿಕಿತ್ಸೆಗೆ ಆಗಮಿಸಿದ್ದ ಗೃಹಿಣಿ ಸುಜಾತ ತಾವು ಬೆಳಗ್ಗೆ 9ಗಂಟೆಯಿಂದ ಕಾಯುತ್ತಿದ್ದ ಮಕ್ಕಳ ವೈದ್ಯರು ನೋಡೋಲ್ಲ ಎಂದು ಅಳಲು ತೋಡಿಕೊಂಡರು. ಇನ್ನು ಮಹಿಳಾ ವೈದ್ಯರೊಬ್ಬರು ಅಪರೇಷನ್ ಅಂತ ಬೆಳಗ್ಗೇನೆ ಆಪರೇಷನ್ ಕೊಠಡಿಯಲ್ಲಿದ್ದಾರೆ. ಯಾರನ್ನು ಕೇಳಬೇಕೆಂದು ಅಸಹಾಯಕತೆ ವ್ಯಕ್ತಪಡಿಸಿದರೆ, ವೃದ್ಧ ಕರೀಂಪಾಷ, ತುಂಬಾ ಜ್ವರ ಇದೆ, ಎಂಟು ಗಂಟೆಯಿಂದ ಕಾಯುತ್ತಿದ್ದೇನೆ ಡಾಕ್ಟರ್ ಈಗ ಬರ್ತಾರೆ, ಆವಾಗ ಬರ್ತಾರೆ ಅಂಥ ಹೇಳ್ತಾನೆ ಇದ್ದಾರೆ, 10.30 ಆದ್ರೂ ವೈದ್ಯರಿಲ್ಲ. ಇಲ್ಲಿ ಕೆಲ್ಸ ಮಾಡೋರ್ನ ಕೇಳಿದ್ರೆ ಡಾಕ್ಟರ್ ಬಂದ್ರೆ ಬರ್ತಾರೆ, ಇಲ್ಲಾಂದ್ರೆ ಇಲ್ಲ ಎದುರಿಗಿರೋ ಖಾಸಗಿ ಕ್ಲಿನಿಕ್ ಹೋಗು ಎನ್ನುತ್ತಾರೆ ಎಂದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಬಾರದಿರುವ ಬಗ್ಗೆ ಅನುಮಾನಗೊಂಡ ಕೆಲವರು, ಕಚೇರಿಗೆ ತೆರಳಿ ಹಾಜರಾತಿ ಪುಸ್ತಕ ತೆಗೆಸಿನೋಡಿದರೆ ಏಳಕ್ಕೂ ಹೆಚ್ಚು ವೈದ್ಯರು ಹಾಜರಾತಿಗೆ ಸಹಿ ಹಾಕಿದ್ದರು. ವಾಸ್ತವವಾಗಿ ಕೇವಲ ಇಬ್ಬರೆ ವೈದ್ಯರು ಕರ್ತವ್ಯದ ಮೇಲಿದ್ದರು. ವೈದ್ಯರ ಅಸಮರ್ಪಕ ಕಾರ್ಯನಿರ್ವಹಣೆ ಬಗ್ಗ ಆಕ್ರೋಶಗೊಂಡ ಮುಖಂಡ ರಮೇಶ್, ಆಸ್ಪತ್ರೆಯ ವೈದ್ಯಾಧಿಕಾರಿ ಗಣೇಶಬಾಬು ಅವರನ್ನು ಸಂಪರ್ಕಿಸಿದಾಗ, ಆವರು ಪ್ರಕರಣವೊಂದರ ವಿಚಾರಣೆಗೆ ದಾವಣಗೆರೆಗೆ ತೆರಳಿದ್ದಾರೆ ಎಂದರು. ನಂತರ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿ, ಆಡಳಿತಾಧಿಕಾರಿ ಗೈರು ಹಾಜರಿಯಲ್ಲಿ ಉಪ ಆಡಳಿತಾಧಿಕಾರಿ ಆಸ್ಪತ್ರೆ ವ್ಯವಸ್ಥೆ ನೋಡಿಕೊಳ್ಳಬೇಕು, ಆದರೆ ಸದರಿಯವರು 12 ಗಂಟೆಗೆ ಕಚೇರಿಗೆ ಬರುತ್ತಾರೆ. ಹೀಗಾದರೆ ಹೇಗೆ ಎಂದು ಆಗಿರುವ ಲೋಪ- ದೋಷ ತಿಳಿಸಿದಾಗ, ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿ, ಸಂಬಂಧಪಟ್ಟ ವೈದ್ಯರಿಗೆ ದೂರವಾಣಿ ಮೂಲಕ ಹಾಜರಾಗುವಂತೆ ಸೂಚಿಸಿದಾಗ ನಾಲ್ವರು ವೈದ್ಯರು 11ಗಂಟೆಗೆ ಕರ್ತವ್ಯಕ್ಕೆ ಆಗಮಿಸಿದರು.
ಒಂದು ಗಂಟೆಗೆ ದಾವಣಗೆರೆಯಿಂದ ಆಗಮಿಸಿ ವೈದ್ಯಾಧಿಕಾರಿ ಗಣೇಶ್ ಬಾಬು, ಆಗಿರುವ ಅವ್ಯವಸ್ಥೆಗೆ ವಿಷಾದ ವ್ಯಕ್ತಪಡಿಸಿ, ಸೇವೆಯಲ್ಲಿನ ವೈದ್ಯರು ಸಕಾಲಕ್ಕೆ ಆಗಮಿಸಿ ಕಾರ್ಯ ನಿರ್ವಹಸುವ ದಿಸೆಯಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹಾಗೂ 24 ಗಂಟೆ ಕರ್ತವ್ಯದ ಮೇಲಿರುವಂತೆ ನೋಡಿಕೊಳ್ಳಲು ರೌಂಡ್ ಕ್ಲಾಕ್ ಡ್ಯೂಟಿ ಡಾಕ್ಟರ್ ವ್ಯವಸ್ಥೆಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದೆಂದರು.
ಪ್ರತಿಭಟನೆ ಎಚ್ಚರಿಕೆ
ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತ ಸಮಯಕ್ಕೆ ಹಾಜರಾಗದೆ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ತಾಲೂಕು ಕನ್ನಡಸೇನೆ, ತಾಲೂಕು ಕರವೇ ಹಾಗೂ ಕುವೆಂಪು ವೇದಿಕೆ ಸಂಘಟನೆಗಳು ಸರ್ಕಾರಿ ಆಸ್ಪತ್ರೆಯ ವೈದ್ಯರು ಸಮಯ ಪಾಲನೆ ರೂಢಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.