ಸೋಲು ಗೆಲವು ಒಂದೇ ನಾಣ್ಯದ 2 ಮುಖಗಳಿದ್ದಂತೆ: ರಂಗಾಪುರ ಶ್ರೀ
ತಿಪಟೂರು: ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧೈರ್ಯ ಮತ್ತು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರಾಗಿ ಬೆಳೆಯಬಹುದು ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಸಂಸ್ಧೆಗಳಲ್ಲಿ ಒಂದಾದ ಗುಬ್ಬಿ ತಾಲೂಕಿನ ಅತ್ತಿಕಟ್ಟೆಯ ಶ್ರೀ ಶಂಕರೇಶ್ವರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 7ನೇ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಪೀಠಾರೋಹಣ ಬೆಳ್ಳಿಹಬ್ಬ ಮಹೋತ್ಸವದ ಸವಿನೆನಪಿನ ಹಾಗೂ 13ನೇ ವರ್ಷದ ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠದ ಪ್ರೌಢಶಾಲೆಗಳ ಅಂತರಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು ಈ ಕ್ರೀಡಾಕೂಟಗಳು ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತದೆ ಎಂದರು.
ನಾಯಕತ್ವ ಗುಣ: ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎನ್.ವೈ.ಅಶ್ವತ್ಥಪ್ಪ, ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಂಯಮ, ಆತ್ಮಸ್ಥೈರ್ಯ ಹಾಗೂ ನಾಯಕತ್ವಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಆಡಳಿತಾಧಿಕಾರಿ ಎಸ್.ಎನ್. ಭದ್ರಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಿ ಆರೋಗ್ಯದಾಯಕ ದೇಹವಿರುತ್ತದೋ ಅಲ್ಲಿ ಆರೋಗ್ಯವಂತ ಮೆದುಳು ಇರುತ್ತದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತವಾದ ಕ್ರೀಡಾ ಪ್ರತಿಭೆಯನ್ನು ವ್ಯಕ್ತಪಡಿಸಲು ಈ ಕ್ರೀಡಾಕೂಟ ಸಹಕಾರಿಯಾಗುತ್ತದೆ ಎಂದರು. ಹಿರಿಯ ವಿದ್ಯಾರ್ಥಿ ಮತ್ತು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಬಿ. ದಿವಾಕರ್, ಅಕ್ಷರದಾಸೋಹದ ಸಹನಿರ್ದೇಶಕ ಸೋಮಶೇಖರ್, ಪ್ರಾಂಶುಪಾಲ ಕೆ.ಎಸ್.ಜಯದೇವಪ್ಪ ಸೇರಿದಂತೆ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ನೌಕರ ವರ್ಗದವರು ಉಪಸ್ಥಿತರಿದ್ದರು. ಎಚ್.ಜಿ. ಮಂಜಪ್ಪ ಸ್ವಾಗತಿಸಿ, ಆರ್.ಬಿ.ದೇವರಾಜು ನಿರೂಪಿಸಿ ,ಬಿ.ಜಿ. ಬಸವರಾಜು ವಂದಿಸಿದರು.