'ಅದ್ವೈತ ಅಧ್ಯಯನದಿಂದ ಮೃತ್ಯುಭಯ ನಿವಾರಣೆ'
ತುಮಕೂರು: ಅದ್ವೈತ ಅಧ್ಯಯನ ಮತ್ತು ಅನುಷ್ಠಾನದಿಂದ ಮೃತ್ಯುಭಯ ನಿವಾರಣೆಯಾಗುತ್ತದೆ ಎಂದು ಡಾ. ಪಾವಗಡ ಪ್ರಕಾಶ್ರಾವ್ ಅಭಿಪ್ರಾಯಪಟ್ಟರು.
ಅವರು ನಗರದ ಬ್ರಾಹ್ಮಣ ಸೇವಾ ಸಂಘದ ಆವರಣದಲ್ಲಿ ಶ್ರೀ ಶಂಕರಾದ್ವೈತ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಆಧುನಿಕ ಜಗತ್ತಿಗೆ ಶಂಕರರ ತತ್ವಗಳ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಶ್ರೀ ಶಂಕರ ಭಗವತ್ಪಾದರು ಅವತರಿಸಿದಾಗ ಭಾರತದಲ್ಲಿ ಹತ್ತು ತರಹದ ತಂತ್ರೋಪಾಸಕರು ಇದ್ದರು. ಅದ್ವೈತ ತತ್ವದ ವಿವರಣೆ ಮಾಂಡೋಕ್ಯೋಪನಿಷತ್ನಲ್ಲಿ ಕಾಣಬಹುದು ಎಂದರು. ದತ್ತಾತ್ರೇಯರಿಂದ ಬಂದದ್ದು ಅದ್ವೈತ. ಆದ್ದರಿಂದ ದತ್ತಾದ್ವೈತವಾಯಿತು. ನಂತರದ ದಿನಗಳಲ್ಲಿ ಶ್ರೀ ಶಂಕರ ಭಗವತ್ಪಾದರು ಅದ್ವೈತದ ನಿಜವಾದ ವಿವರಣೆಯನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ತೋರಿಸಿಕೊಟ್ಟರು ಎಂದರು.
ಜೀವಿತದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಮಹಾಭಯ ಸಾವಿನಲ್ಲಿದೆ. ಭಯ ನಿವಾರಣೆಯಾಗಬೇಕಾದರೆ ನಮ್ಮಲ್ಲಿರುವ ಅಜ್ಞಾನ ತೊಲಗಬೇಕು. ಹೆದರಿಕೆ ಹುಟ್ಟುವುದು ಅಜ್ಞಾನದಿಂದ, ಕತ್ತಲಿಂದ ಬೆಳಕಿಗೆ ಬರುವ ಪ್ರಯತ್ನ ಮಾಡಬೇಕು. ಅದಕ್ಕೆ ಶ್ರೀ ಶಂಕರರ ಚಿಂತನೆ ಹಾಗೂ ಕೃತಿಗಳು ತುಂಬಾ ಸಹಾಯಕವಾಗಬಲ್ಲವು ಎಂದರು.
ದೈವಕ್ಕೆ ಆಕಾರವಿಲ್ಲ. ಎಲ್ಲಾ ಕಾಲದ ಘರ್ಷಣೆಗಳನ್ನು ಕಿತ್ತು ಹಾಕಿ ಅಜ್ಞಾನ ಪರಿಹಾರ ಮಾಡಿದ ಶ್ರೇಷ್ಠರು ಶಂಕರಾಚಾರ್ಯರು ಎಂದರು.
ಸಾವು ಎನ್ನುವುದು ದೇಹಕ್ಕೆ ಹೊರೆತು ಆತ್ಮಕಲ್ಲ. ಆತ್ಮ ಅಮರ. ಬಾಡಿಗೆ ಮನೆಯನ್ನು ಬದಲಾಯಿಸುವಂತೆ ಮೋಕ್ಷ ಸಾಧನೆಗೆ ಅದ್ವೈತ ವೇದಾಂತ ಅಧ್ಯಯನ ಬಹಳ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಶ್ರೀ ಶಂಕರ ತತ್ವ ಪ್ರಚಾರ ಅಭಿಯಾನಂ ಸಂಚಾಲಕ ಬಿ.ಎನ್. ಮೂರ್ತಿ ನೆರವೇರಿಸಿದರು. ನಂತರ ಮಾತನಾಡಿ ಶಾಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಶಂಕರರ ತತ್ವಗಳ ಬಗ್ಗೆ ಕನಿಷ್ಠ ಜ್ಞಾನ ಇರಬೇಕು ಎಂದರು. ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಎಂ.ಕೆ. ನಾಗರಾಜರಾವ್ ಅಭಿಯಾನದ ಸ್ವರೂಪ ಮತ್ತು ಮಹತ್ವ ತಿಳಿಸಿದರು. ಟ್ರಸ್ಟ್ನ ಅಧ್ಯಕ್ಷ ಕಲ್ಲೂರು ಸುಬ್ಬಣ್ಣ ಮಾತನಾಡಿ ಶಂಕರ ಎಂದರೆ ಭಯ ನಿವಾರಣೆಯಾಗಿ ಆತ್ಮ ಶಕ್ತಿ ಜಾಗೃತವಾಗುತ್ತದೆ ಎಂದು ತಿಳಿಸಿದರು.
ಜಯಶ್ರೀ ಪ್ರಾರ್ಥಿಸಿದರು. ನಾ. ವೆಂಕಟೇಶ್ ಜೋಯಿಸ್ ನಿರೂಪಿಸಿದರು. ಎಂ.ಎಸ್. ರಂಗನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎನ್. ರಮೇಶ್ ವಂದಿಸಿದರು.