ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಪ್ಪ, ಅಜ್ಜ, ಅಜ್ಜಿಯಿಂದಲೇ ಮಗುವಿನ ಕಗ್ಗೊಲೆ: ದೂರು

Rashmi Kasaragodu
Updated On : 20 Jul 2013, 12:27 pm

ಕ.ಪ್ರ.ವಾರ್ತೆ   ತುರುವೇಕೆರೆ   ಜು. 19
ಅದು ಇನ್ನೂ ಹಾಲುಗಲ್ಲದ ಕಂದ. ಪ್ರಪಂಚದ ಅರಿವೂ ಇರದ ಕಂದಮ್ಮ. ಪುಟ್ಟ ಪುಟ್ಟ ಕಾಲು, ಕೈಗಳಲ್ಲಿ ತನ್ನನ್ನು ಎತ್ತುಕೊಂಡವರಿಗೆ ಸೋಕಿಸುತ್ತಾ ಆನಂದ ನೀಡುತ್ತಿದ್ದ ಮುದ್ದು ಕಂದ. ಈ ಹಸುಗೂಸು ಈಗ ತನ್ನ ಕುಟುಂಬದವರಿಂದಲೇ ಮತ್ತೆಂದೂ ಬಾರದ ಲೋಕಕ್ಕೆ ಹೋಗಿ ಬಿಟ್ಟಿದೆ.
ಕೇವಲ 13 ತಿಂಗಳ ಈ ಕಂದನನ್ನು ಕೈಯಾರೆ ಎತ್ತಿ ಆಡಿಸಿದ್ದವರೇ ಕೊಂದು ಹಾಕಿದ್ದಾರೆ. ಹೌದು ಇಂತಹ ಪಾಪ ಕೃತ್ಯ ಜರುಗಿರುವುದು ತಾಲೂಕಿನ ಕರಡಗೆರೆ ಗ್ರಾಮದಲ್ಲಿ. ತನ್ನ ಪತಿ ರಘುಕುಮಾರ್ (30), ಅತ್ತೆ ರಂಗಮ್ಮ ಹಾಗೂ ಮಾವ ಲಕ್ಷ್ಮಣ ಸೇರಿ ನನ್ನ ಮಗ ವಿಶಾಲ್ (13 ತಿಂಗಳು)  ನನ್ನು ಕೊಂದು ಹಾಕಿದ್ದಾರೆ ಎಂದು ಮಗುವಿನ ತಾಯಿ ಸುನಿತಾ(22) ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.  ಗುರುವಾರ ಸಾಯಂಕಾಲ ತಾನು ಹೊಲದಲ್ಲಿದ್ದ ಎಮ್ಮೆಯನ್ನು ಮನೆಗೆ ಕರೆತರುವ ವೇಳೆಗೆ ಮಗುವಿನ ಬಾಯಿಯಲ್ಲಿ ಜೊಲ್ಲು ಸುರಿಯುತ್ತಿತ್ತು. ನನ್ನ ಪತಿ ಹಾಗೂ ಅತ್ತೆ ಮಾವನವರನ್ನು ಕೇಳಿದಾಗ ಯಾವುದೇ ಸೂಕ್ತ ಉತ್ತರ ನೀಡಲಿಲ್ಲ. ಪಕ್ಕದ ಮನೆಯವರೊಡನೆ ಬೆಳ್ಳೂರಿನ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆ. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚುಂಚನಗಿರಿ ಆಸ್ರತೆಗೆ ಕರೆದುಕೊಂಡು ಹೋದ ನಂತರ ಅಲ್ಲಿ ಮಗು ಮೃತಪಟ್ಟಿರುವ ಸಂಗತಿಯು ಬಹಿರಂಗವಾಯಿತು ಎಂದು ಮಗುವಿನ ತಾಯಿ ಸುನಿತಾ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಚಂದವಿಲ್ಲವೆಂದು ಮೂದಲಿಸುತ್ತಿದ್ದರು: ಕಳೆದ ಮೂರು ವರ್ಷಗಳ ಹಿಂದೆ ತಾಲೂಕಿನ ಬೆನಕನಕೆರೆಯ ರಾಮೇಗೌಡ ಹಾಗೂ ಶಾರದಮ್ಮರ ಮಗಳು ಸುನೀತಾಳನ್ನು ಕರಡಗೆರೆಯ ಲಕ್ಷ್ಮಣನ ಮಗ ರಘುಕುಮಾರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗಳಿಗೆ 13 ತಿಂಗಳ ಗಂಡು ಮಗು ಸಹ ಇದೆ. ಮಗುವಾದ ನಂತರ ತನ್ನ ಗಂಡ ರಘುಕುಮಾರ ತಾನು ಸುಂದರವಾಗಿಲ್ಲ, ಸಣಕಲು ದೇಹದವಳು ಎಂದು ಪದೇ ಪದೇ ಹಂಗಿಸುತ್ತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ದೂರಿದ್ದಾಳೆ. ಅಲ್ಲದೇ ತಾನು ಬೇರೆ ಮದುವೆಯಾಗುವುದಾಗಿಯೂ ಹೆದರಿಸುತ್ತಿದ್ದ.  ಕೆಲ ತಿಂಗಳ ಹಿಂದೆ ಈರ್ವರ ನಡುವಿನ ಜಗಳ ಮಿತಿ ಮೀರಿದಾಗ ಸುನಿತಾಳು ವಿಷಪ್ರಾಷನ ಸಹ ಮಾಡಿಕೊಂಡಿದ್ದಳು ಎಂದು ಹೇಳಲಾಗಿದೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಆದರೂ ಸಹ ಈರ್ವರ ನಡುವೆ ಕಿತ್ತಾಟವಂತೂ ಇತ್ತು ಎಂದು ಹೇಳಲಾಗಿದೆ. ಗುರುವಾರ ಸಾಯಂಕಾಲ 4.30 ರಲ್ಲಿ ತನ್ನ ಗಂಡ, ಮಾವ ಹಾಗೂ ಅತ್ತೆ ಎಲ್ಲರೂ ಮನೆಯಲ್ಲೇ ಇದ್ದು ತನ್ನನ್ನು ಎಮ್ಮೆಯನ್ನು ಹೊಲದಿಂದ ಕರೆದುಕೊಂಡು ಬಾ ಎಂದು ಹೇಳಿ ನನ್ನನ್ನು ಹೊರಗೆ ಕಳಿಸಿ ತನ್ನ ಮಗುವನ್ನು ಕೊಂದು ಹಾಕಿದ್ದಾರೆ ಎಂದು ಸುನಿತಾ ದೂರಿದ್ದಾಳೆ. ದೂರಿನನ್ವಯ ಗಂಡ ರಘುಕುಮಾರ್, ಮಾವ ಲಕ್ಷ್ಮಣ, ಅತ್ತೆ ರಂಗಮ್ಮನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಡಿ ವೈಎಸ್ಪಿ ಉಷಾರಾಣಿ ತಿಳಿಸಿದ್ದಾರೆ. ಸಿಪಿಐ ತಿರುಮಲಯ್ಯ ಎಸೈ ಅಜರುದ್ದೀನ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಮಗು ವಿಶಾಲ್ ನನ್ನು ಉಸಿರುಕಟ್ಟಿಸಿ ಸಾಯಿಸಲಾಗಿದೆಯೋ ಅಥವಾ ವಿಷಪ್ರಾಶನ ಮಾಡಿಸಿ ಕೊಲ್ಲಲಾಗಿದೆಯೋ ಎಂಬುದು ಮರಣೋತ್ತರ ಪರೀಕ್ಷಾ ಫಲಿತಾಂಶದ ನಂತರವೇ ತಿಳಿಯಬಹುದಾಗಿದೆ ಎಂದು  ಪೋಲಿಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement