ತಮಿಳು ಕಾಲೋನಿಯಲ್ಲಿ ನೀರಿಗೆ ಹಾಹಾಕಾರ: ನಗರಸಭೆ ವಿರುದ್ಧ ಧರಣಿ
ತಿಪಟೂರು: ನಗರಸಭೆಯ ವ್ಯಾಪ್ತಿಯಲ್ಲಿರುವ 29ನೇ ವಾರ್ಡ್ನ ತಮಿಳು ಕಾಲೋನಿ ಬಡಾವಣೆಯು ನಗರಸಭೆಯ ದಿವ್ಯ ನಿರ್ಲಕ್ಷ್ಯದಿಂದ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿದೆ ಎಂದು ಇಲ್ಲಿನ ನಿವಾಸಿಗಳು ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ.
ಈ ವಾರ್ಡ್ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ವಾರ್ಡ್ನ ಎರಡು ಕೊಳವೆ ಬಾವಿಗಳಲ್ಲಿಯೂ ನೀರು ಬತ್ತಿಹೋಗಿದ್ದು, ಇದರಿಂದ ಜನತೆಯು ಕುಡಿಯುವ ನೀರಿಗಾಗಾಗಿ ತೀವ್ರ ಹಾಹಾಕಾರ ಪಡುವಂತಾಗಿದೆ.
ವಾರ್ಡ್ಗೆ ಟ್ಯಾಂಕರ್ ನೀರಿನ ವ್ಯವಸ್ಥೆಯನ್ನೂ ಕಲ್ಪಿಸದೇ ಅಧಿಕಾರಿಗಳು ನಿರ್ಲಕ್ಷ್ಯಿಸುತ್ತಿದ್ದಾರೆ. ವಾರ್ಡ್ನ 8ನೇ ಕ್ರಾಸ್ ರಸ್ತೆಗಳಲ್ಲಿ ಪೈಪ್ ಲೈನ್ ಸಂಪರ್ಕ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಬರಪರಿಹಾರ ಕಾಮಗಾರಿ ಯೋಜನೆಯಲ್ಲಿ ಇತರೆ ವಾರ್ಡ್ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, 29ನೇ ವಾರ್ಡ್ನ್ನು ಕಡೆಗಣಿಸಿರುವುದು ಇಲ್ಲಿನ ನಿವಾಸಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಗರಸಭಾ ಸದಸ್ಯರ ಮನವಿಗೂ ಇಲ್ಲಿ ಬೆಲೆ ಇಲ್ಲದಂತಾಗಿದೆ. ತಕ್ಷಣ ವಾರ್ಡ್ನ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸದಿದ್ದರೆ ನಗರಸಭಾ ಕಚೇರಿ ಎದುರು ವಾರ್ಡ್ನ ಜನರೊಂದಿಗೆ ಧರಣಿ ಹಮ್ಮಿಕೊಳ್ಳುವುದಾಗಿ ನಗರಸಭಾ ಸದಸ್ಯ ಲೋಕೇಶ್ ಎಚ್ಚರಿಕೆ ನೀಡಿದ್ದಾರೆ.