ಮಣ್ಣಿನ ಮಾದರಿ ತೆಗೆಯುವ ಪ್ರಾತ್ಯಕ್ಷಿಕೆ
ಕ.ಪ್ರ. ವಾರ್ತೆ ತಿಪಟೂರು ಜು.19
ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭೂಚೇತನ ಯೋಜನೆಯಡಿ ತಾಲೂಕಿನ ರೈತ ಅನುವುಗಾರರಿಗೆ ಒಂದು ವಾರದ ತರಬೇತಿ ಕಾರ್ಯಕ್ರಮ ಅಂಗವಾಗಿ ಮಣ್ಣಿನ ಮಾದರಿ ತೆಗೆಯುವ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಮಣ್ಣು ವಿಜ್ಞಾನದ ವಿಷಯ ತಜ್ಞ ಡಾ.ಬಿ. ಮಮತಾ ಅವರು ಮಣ್ಣಿನ ಮಾದರಿ ತೆಗೆಯುವುದು ಹಾಗೂ ಮಣ್ಣು ಪರೀಕ್ಷೆ ಮಾಡಿಸುವುದರಿಂದಾಗುವ ಉಪಯೋಗಗಳು ಕುರಿತು ಪ್ರಾತ್ಯಕ್ಷಿಕೆ ವಿವರಿಸಿದರು. ಮಣ್ಣಿನಲ್ಲಿರುವ ಮುಖ್ಯ ಪೋಷಕಾಂಶಗಳ ಮಟ್ಟ ಅರಿಯಲು, ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳ ಪ್ರಮಾಣ ನಿರ್ಧರಿಸಿ ಶಿಫಾರಸು ಮಾಡಲು ಹಾಗೂ ಮಣ್ಣಿನಲ್ಲಿರುವ ರಸಸಾರದ ಮಟ್ಟ ಮತ್ತು ಲವಣದ ಅಂಶದ ಬಗ್ಗೆ, ಮಣ್ಣಿನ ಸುಧಾರಣೆಗೆ ಮಾರ್ಗದರ್ಶನ ಹಾಗೂ ಮಣ್ಣು ಪರೀಕ್ಷೆ ಮಾಡಿಸುವುದು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.