ಆಂತರಿಕ ಜಗಳದಿಂದ ಬಿಜೆಪಿ ಸೋಲು: ಸುರೇಶ್ಗೌಡ
ತುಮಕೂರು: ಪಕ್ಷದಲ್ಲಿನ ಆಂತರಿಕ ಜಗಳದಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು. ಯಡಿಯೂರಪ್ಪ ಸೇರಿದಂತೆ ಪಕ್ಷ ಬಿಟ್ಟು ಹೋಗಿರುವವರನ್ನು ಕರೆ ತರುವ ಹಿನ್ನೆಲೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಬಿ. ಸುರೇಶ್ಗೌಡ ತಿಳಿಸಿದರು. ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಇಬ್ಭಾಗವಾಗಿರುವ ಸಂದರ್ಭದಲ್ಲಿ ತಮಗೆ ಅಧ್ಯಕ್ಷಗಿರಿ ಸಿಕ್ಕಿದೆ. ಪಕ್ಷ ಸಂಘಟನೆ ಸವಾಲಾಗಿದ್ದು, ಪಕ್ಷ ಕಟ್ಟಲು ಶಕ್ತಿ ಮೀರಿ ಶ್ರಮಿಸುವೆ ಎಂದರು. ರಾಜಕಾರಣ ವ್ಯಾಪಾರೀಕರಣವಾಗಿದೆ. ಜಾತಿ, ಹಣದ ನಡುವೆ ಚುನಾವಣೆಗಳು ನಡೆಯುತ್ತಿರುವುದು ವಿಷಾದನೀಯ ಎಂದರು. ಪಕ್ಷ ವಿಭಜನೆಯಾಗಿದ್ದರಿಂದ ಜಿಲ್ಲೆಯಲ್ಲಿ ಗೆಲ್ಲಬೇಕಾಗಿದ್ದ 6 ಮಂದಿ ಸೋಲು ಅನುಭವಿಸಬೇಕಾಯಿತು ಎಂದರು.