ಕಲಾ ಕಾಲೇಜಿನಲ್ಲಿ ಅಭಿವಿನ್ಯಾಸ ಉದ್ಘಾಟನೆ
ಹಾಸನ: ಅಭಿವಿನ್ಯಾಸ (ಮಾರ್ಗದರ್ಶನ) ಕಾರ್ಯಕ್ರಮ ನಗರದಲ್ಲಿ ನಡೆಯಿತು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಅಭಿವಿನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಜೀವನದಲ್ಲಿ ಮುಖ್ಯಘಟ್ಟವಾಗಿದ್ದು, ಅದನ್ನು ಅರಿತು ವಿದ್ಯಾರ್ಥಿಗಳು ಮುನ್ನಡೆಯಬೇಕು. 3 ವರ್ಷಗಳ ಪದವಿ ಶಿಕ್ಷಣ ವ್ಯಕ್ತಿತ್ವ ರೂಪಿಸಿ ಆ ಮೂಲಕ ದುಡಿಯುವ ಶಕ್ತಿಯನ್ನಾಗಿ ದೇಶದ ಅಭಿವೃದ್ಧಿಗೆ ಪೂರಕವಾಗುವ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಅವಧಿಯಾಗಿದೆ ಎಂದು ಹೇಳಿದರು.
ಶಿಕ್ಷಣ ನಮ್ಮ ಜ್ಞಾನ ಹಾಗೂ ಜೀವನ ಮಟ್ಟ ಸುಧಾರಣೆಯ ಸಲಕರಣೆಗಳಾಗಬೇಕೆ ಹೊರತು ಯಾಂತ್ರಿಕ ಬದುಕಿನ ಮೂಲಕ ಮಾನವೀಯ ಮೌಲ್ಯ ಸಂಬಂಧಗಳನ್ನು ಮರೆಸುವ ಸಾಧನವಾಗಬಾರದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರಿ, ನಿರಂತರ ಪರಿಶ್ರಮದಿಂದ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ಮಾತನಾಡಿ, ಹಾಸನ ಸರ್ಕಾರಿ ಕಲಾ ಕಾಲೇಜು ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನ್ಯಾಕ್ ಸಂಸ್ಥೆಯಿಂದ ಎ ಶ್ರೇಣಿ ಪಡೆದ ಕಾಲೇಜಾಗಿದೆ. ಎಲ್ಲಾ ರೀತಿಯ ಸೌಲಭ್ಯಗಳು, ಶೈಕ್ಷಣಿಕ ಪರಿಸರ ಇಲ್ಲಿದೆ. ಅದನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಹೊಣೆಯಾಗಿದೆ ಎಂದರು.