ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೋಟ್ಸ್ ಬರ್ಕಳಣ ಅಂದ್ರೆ ನೋಟ್ಬುಕ್ಕೆ ಕೊಟ್ಟಿಲ್ಲ...

Rashmi Kasaragodu
Updated On : 21 Jul 2013, 12:56 pm

ಕನ್ನಡಪ್ರಭ ವಾರ್ತೆ, ತುರುವೇಕೆರೆ, ಜು.20
ಮಿಸ್ ಇಲ್ಲಿ ಸಕತ್ ಇಲಿ, ಹೆಗ್ಗಣಗಳ ಕಾಟ. ಹಾಸ್ಟೆಲ್ನೋರು ಕೊಟ್ಟಿರೋ ಬೆಡ್ಶೀಟ್ ತಲೆಗೆ ಹೊದ್ಗಂಡ್ರೆ ಕಾಲಿಗಾಗಲ್ಲ. ಕಾಲಿಗೆ ಹಾಕಂಡ್ರೆ ತಲೆಗೆ ಸಾಕಾಗಲ್ಲ. ಹಾಗಾಗಿ ಸೊಳ್ಳೆ ಕಾಟ. ಸ್ಕೂಲ್ನಲ್ಲಿ ಪಾಠ ಶುರು ಆಗಿದೆ. ನೋಟ್ಸ್ ಬರೆಸ್ತಾ ಇದ್ದಾರೆ. ಆದರೆ, ನಾವು ನೋಟ್ಸ್ ಬರ್ಕಳಣ ಅಂದ್ರೆ ನಮಗೇ ಇಲ್ಲಿ ನೋಟ್ಬುಕ್ಗಳನ್ನೇ ಕೊಟ್ಟಿಲ್ಲ. ಈ ಪಟ್ಟೀಲಿ ಹಾಕಿರೋ ತರಹ ಯಾವತ್ತೂ ನಂಗೆ ಆಹಾರ ಕೊಡ್ತಾ ಇಲ್ಲ. ಬರೀ ಬೋರ್ಡ್ನಲ್ಲಿ ಮಾತ್ರ ಇದೆಲ್ಲಾ ಇದೆ. ಸೊಳ್ಳೆ ಕಾಟ ತಪ್ಪಿಸ್ಕಳಕ್ಕೆ ಅಂತ ಫ್ಯಾನ್ ಹಾಕಂಡ್ರೆ ಬೈದು ಆರಿಸುತ್ತಾರೆ. ಪಾಯಸ ಅಂತ ಮಾಡ್ತಾರೆ, ಅದು ಪಾನಕದ ರೀತಿ ಇರುತ್ತೆ. ಹೀಗೆ ಮಾಡುದ್ರೆ ಏನ್ ಮಾಡದು ಮಿಸ್.
ಇದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಮಹಲಿಂಗಪ್ಪ ಅವರ ಮುಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಆಶ್ರಯದಲ್ಲಿ ನಡೆಯುತ್ತಿರುವ ಹಾಸ್ಟೆಲ್ ಮಕ್ಕಳು ದೂರಿದ ಸ್ಯಾಂಪಲ್ಗಳು.
ಪಟ್ಟಣದ ಗಂಗಾಧರೇಶ್ವರ ದೇವಾಲಯದ ಬಳಿ ಹಿಂದುಳಿದ ವರ್ಗಗಳ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್ಗೆ ಧಿಡೀರನೆ ಜಿಲ್ಲಾ ಪಂಚಾಯಿತಿ ಸದಸ್ಯ ಉಗ್ರಪ್ಪ ಅವರೊಂದಿಗೆ ಭೇಟಿ ಮಾಡಿದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪ್ರೇಮಾ ಮಹಲಿಂಗಪ್ಪ ಅವರ ಮುಂದೆ ಸಾಲು ಸಾಲಾಗಿ ದೂರುಗಳ ಸರಮಾಲೆ ಇದ್ದವು. ಮಕ್ಕಳ ದೂರು ಆಲಿಸಿದ ಅಧ್ಯಕ್ಷರು ಇವುಗಳನ್ನು ಪರಿಹಾರ ಮಾಡುವುದಾದರೂ ಹೇಗೆ ಎಂದು ತಲೆ ಕೆರೆದುಕೊಂಡರು.  ಹಾಸ್ಟೆಲ್ಗೆ ಬಂದ ತಕ್ಷಣವೇ ಭೇಟಿ ನೀಡಿದ್ದು ಅಡುಗೆ ಮನೆಗೆ.
ಅಲ್ಲಿ ಅಡುಗೆ ಮಾಡಲು ಹಾಗೂ ಮಕ್ಕಳಿಗೆ ಕುಡಿಯಲು ಅಂತ ಹಿಡಿದಿಟ್ಟಿದ್ದ ನೀರು ಅಧ್ಯಕ್ಷರನ್ನು ಸಿಟ್ಟಿಗೇಳಲು ಕಾರಣವಾಯಿತು. ಕಂದು ಬಣ್ಣಕ್ಕೆ ತಿರುಗಿದ್ದ ನೀರು ಕಂಡ ಅವರು ಅಲ್ಲಿದ್ದ ಅಡುಗೆ ಸಹಾಯಕ ಶಿವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.
 ನಲ್ಲಿಯಲ್ಲಿ ಬರುತ್ತಿರುವ ನೀರೆ ಹಾಗಿದೆ ಮೇಡಂ ಎಂದು ಶಿವಣ್ಣ ಪರಿಸ್ಥಿತಿ ಸಮರ್ಥಿಸಿಕೊಂಡರು.
ಅಧ್ಯಕ್ಷೆ ಇವೆಲ್ಲಾ ಕೇಳ್ತಾಯಿದ್ರೆ ನಮ್ಮ ಆಡಳಿತದ ಬಗ್ಗೆ ನಮಗೇ ಬೇಸರ ಬರುತ್ತೆ. ಬಡ ಮಕ್ಕಳಿಗೆ ನೆಟ್ಟಗೆ ವ್ಯವಸ್ಥೆ ಮಾಡಕ್ಕಾಗ್ತಿಲ್ವಲ್ಲಾ ಅಂತ ಬೇಸರವಾಗುತ್ತೆ ಅಂತ ತಲೆ ಚಚ್ಚಿಕೊಂಡರು. ಮಕ್ಕಳ ಹಾಜರಾತಿ ಪುಸ್ತಕದಲ್ಲಿ ಭಾರಿ ಏರುಪೇರಿತ್ತು. ಅಟೆಂಡೆನ್ಸ್ ಹಾಕಿ ಮಕ್ಕಳ ಸಂಖ್ಯೆಯನ್ನು ಖಚಿತಪಡಿಸಿಕೊಂಡರು.  ಇವೆಲ್ಲಾ ಅವ್ಯವಸ್ಥೆ ಕಣ್ಣಾರೆ ಕಂಡ ಅಧ್ಯಕ್ಷೆ ಪ್ರೇಮಾ ಮಹಲಿಂಗಪ್ಪ ಕೂಡಲೇ ಜಿಲ್ಲಾ ಅಧಿಕಾರಿ ಮುದ್ದುಕುಮಾರ್ ಅವರಿಗೆ ಫೋನಾಯಿಸಿದರು. ಸಾರನ್ನು ನೋಡುದ್ರೆ ಎಮ್ಮೆ, ಕರುಗಳಿಗೆ ಹಾಕೋ ಮುಸುರೆ ಇದ್ದಂಗೆ ಇದೆ. ಇವತ್ತು ಮಕ್ಕಳಿಗೆ ಸಾಯಂಕಾಲ ತಿನ್ನೋಕೆ ಅಂತ ಬರೀ ಪುರಿ ಕೊಟ್ಟಿದ್ದಾರೆ. ಮಕ್ಕಳ ಜವಾಬ್ದಾರಿ ಹೊರೋ ಮಂದಿ ಈ ಹಾಸ್ಟೆಲ್ನಲ್ಲಿ ಇದ್ದಂಗೆ ಕಾಣ್ತಾ ಇಲ್ಲ. ಮೊನ್ನೆ ತಾನೇ ಮೀಟಿಂಗ್ ಮಾಡಿದೀನಿ. ಮಕ್ಕಳ ಬಗ್ಗೆ ಅಸಡ್ಡೆ ಬೇಡ ಅಂತ. ಆದರೂ ನಿಮ್ಮ ಇಲಾಖೆಲಿ ಈ ರೀತಿ ಬೇಜವಾಬ್ದಾರಿ ತನ ತಾಂಡವಾಡ್ತಾ ಇದೆ.
ಹೀಗಾದ್ರೆ ನಾವು ಯಾರನ್ನು ಕೇಳಬೇಕು ಹೇಳಿ ಅಂತ ಸಿಡುಕಿದರು. ಇಲ್ಲಾ ಮೇಡಂ ನಾಳೆನೇ ನಾನು ಸ್ಪಾಟ್ ವಿಸಿಟ್ ಮಾಡಿ ಪರಿಸ್ಥಿತಿ ಸುಧಾರಿಸುತ್ತೀನಿ ಅಂತ ಮುದ್ದುಕುಮಾರ್ ಅತ್ತಿಂದ ಅಧ್ಯಕ್ಷೆ ಪ್ರೇಮಾ ಮಹಲಿಂಗಯ್ಯ ಅವರಿಗೆ ಭರವಸೆ ನೀಡಿದರು.  ಜಿಲ್ಲಾ ಪಂಚಾಯಿತಿ ಸದಸ್ಯ ಉಗ್ರಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರತ್ಮಮ್ಮ ವೆಂಕಟೇಗೌಡ, ಜಿಪಂ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ ಮೊದಲಾದವರು ಇದ್ದರು.



ಮೊಟ್ಟೆ ಕೊಟ್ಟು ವಾರವೇ ಆಯ್ತು...
ಮಿಸ್ ಶೂ ಕೊಟ್ಟಿಲ್ಲ, ಮೊಟ್ಟೆ ಕೊಟ್ಟು ವಾರವೇ ಆಯ್ತು. ಹಾಲು ಅಂತ ಕೊಡ್ತಾರೆ ದೇವರಿಗೇ ಪ್ರೀತಿ. ನೀರು ಹುಯ್ದಿರ್ತಾರೆ. ಅವರು ಮಾತ್ರ ಗಟ್ಟಿ ಹಾಲಲ್ಲಿ ಟೀ ಮಾಡ್ಕಂಡು ಕುಡಿತಾರೆ. ಹಳಸಿದ ಅನ್ನ ಹಾಕ್ತಾರೆ. ಬೆಳಗ್ಗೆ ಮಾಡಿದ್ದ ಚಿತ್ರಾನ್ನನ ರಾತ್ರಿನೂ ಹಾಕ್ತಾರೆ. ಸ್ಪೋರ್ಟ್ನ ಯಾವ ಐಟಂ ನ್ನೂ ಕೊಟ್ಟಿಲ್ಲ ಮಿಸ್. ನಾವೇ ಬಾತ್ರೂಂ ಕ್ಲೀನ್ ಮಾಡ್ಬೇಕು. ಮುಖ ತೊಳ್ಯಾಕೆ ನಾವೆಲ್ಲಾ ದೂರದಲ್ಲಿರೋ ವಾಟರ್ ಟ್ಯಾಂಕ್ ಹತ್ರಕ್ಕೆ ಹೋಗ್ಬೇಕು. ಸ್ನಾನಕ್ಕೆ ಬಿಸಿ ನೀರಿಲ್ಲ. ತಣ್ಣಿರೇ ಗತಿ ಮಿಸ್. ಬಟ್ಟೆ ಒಗೆಯೂಕ್ಕೂ ಜಾಗ ಇಲ್ಲ... ಹೀಗೆ ಸಮಸ್ಯೆಗಳ ಸಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಮಹಲಿಂಗಯ್ಯ ಅವರ ಮುಂದೆ ಮಕ್ಕಳ ಬಾಯಿಯಿಂದ ಪುಂಖಾನುಪುಂಖವಾಗಿ ಹರಿಯುತ್ತಲೇ ಇದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement