ರಾಷ್ಟ್ರೀಯ ಭಾಷಾ ನೀತಿ ಜಾರಿಯಾಗಲಿ
ಕ.ಪ್ರ. ವಾರ್ತೆ ಮಧುಗಿರಿ ಜು.20
ರಾಷ್ಟ್ರೀಯ ಭಾಷಾ, ಶಿಕ್ಷಣ ಹಾಗೂ ಜಲ ನೀತಿ ಜಾರಿಗೊಂಡಾಗ ಮಾತ್ರ ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ಗೌರಿಬಿದನೂರು ರಸ್ತೆಯ ಮಹಾತ್ಮಗಾಂಧಿ ಬಡಾವಣೆಯಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಿಸಿರುವ ನೂತನ ವಿದ್ಯಾರ್ಥಿನಿಲಯದ ಕಟ್ಟಡ ಉದ್ಘಾಟಿಸಿ ನಂತರ ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಷ್ಟ್ರೀಯ ಭಾಷಾ ನೀತಿ, ಶಿಕ್ಷಣ ನೀತಿ ಮತ್ತು ಜಲ ನೀತಿ ಜಾರಿಗೊಂಡಾಗ ಆಯಾ ರಾಜ್ಯದ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರಕಿಸಿ ಕೊಟ್ಟಂತಾಗುತ್ತದೆ. ಇಂಗ್ಲಿಷ್ ಭಾಷಾ ಕಲಿಕೆ ವಿಶ್ವ ಜ್ಞಾನ ತಿಳಿಯಲು ಅತ್ಯವಶ್ಯಕ. ಆದರೆ, ನಮ್ಮ ಮಾತೃ ಭಾಷಾ ಶಿಕ್ಷಣದಿಂದ ಸುತ್ತಮುತ್ತಲಿನವರ ಕಷ್ಟ ತಿಳಿಯಲು ಸಾಧ್ಯವಾಗುತ್ತದೆ. ಜೊತೆಗೆ ನಮ್ಮ ಗ್ರಹಿಕೆ ಸುಲಭವಾಗಿ ಅಂತಃಕರಣ ಅರಳುತ್ತದೆ. ಭಾವನೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಇತರರಿಗೆ ಭಾಷಾ ಭಾವನೆ ಬೆಳೆಯಲು ಮಾತೃ ಭಾಷೆ ಕನ್ನಡದ ಮೂಲಕವೇ ಸಾಧ್ಯ. ಆದ ಕಾರಣ ರಾಷ್ಟ್ರೀಯ ಭಾಷಾ, ಶಿಕ್ಷಣ ಹಾಗೂ ಜಲ ನೀತಿ ಅತಿ ಶೀಘ್ರ ಜಾರಿಗೆ ಬರಲಿ ಎಂದು ಆಗ್ರಹಿಸಿದರು.
ಶಾಸಕ ಕೆ.ಎನ್. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘಟನೆ ಮೂಲಕ ಜನಾಂಗದ ಕಷ್ಟ- ಸುಖ ಹೀಗೆ ಹತ್ತು ಹಲವು ಅಬಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಹಕಾರಿ. ಅಲ್ಲದೆ, ಮುಂದಿನ ಪೀಳಿಗೆಗೆ ಒಗ್ಗಟ್ಟು ಅತಿ ಮುಖ್ಯ. ಆ ನಿಟ್ಟಿನಲ್ಲಿ ಜನಾಂಗದ ಎಲ್ಲರೂ ಸೇರಿ ಮಕ್ಕಳ ಶಿಕ್ಷಣ ಕಲಿಕೆಗೆ ವಿದ್ಯಾರ್ಥಿ ನಿಲಯ ಕಟ್ಟಡ ಕಟ್ಟಿರುವುದು ಸಂತಸದ ವಿಚಾರ. ಅದೇ ರೀತಿ ಯಾವುದೇ ಒಂದು ಸಮಾಜದ ವಿದ್ಯಾರ್ಥಿನಿಲಯವಾಗಲಿ ಎಲ್ಲ ಸಮಾಜದ ಬಡ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕೊಟ್ಟಾಗ ಮಕ್ಕಳಲ್ಲಿ ಂಕುಚಿತ ಮನೋಭಾವ ಹೋಗಿ ವಿಶಾಲ ಮನಸ್ಥಿತಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಂಸದ ಜಿ.ಎಸ್. ಬಸವರಾಜು ಹಿಂದೂ ಸಾದರ ನೌಕರರ ಸಂಘ ಉದ್ಘಾಟಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅವಶ್ಯಕ. ಗ್ರಾಮೀಣ ಮಕ್ಕಳಿಗೆ ವ್ಯಾಸಂಗ ಮಾಡುವ ಆಸಕ್ತಿ, ಶ್ರದ್ಧೆಯಿದ್ದು, ಅವಕಾಶ ಇರುವುದಿಲ್ಲ. ಅಂತಹ ವಂಚಿತರಿಗೆ ವಿದ್ಯಾರ್ಥಿನಿಲಯ ಸಹಕಾರಿಯಾಗಲಿದೆ ಎಂದರು.
ಕೇಂದ್ರ ಸಂಘದ ಅಧ್ಯಕ್ಷ ಡಿ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪದ್ಮ ಮುಖ್ಯಮಂತ್ರಿ ಚಂದ್ರು, ಎ.ಡಿ. ಬಲರಾಮಯ್ಯ, ಸಿ.ಆರ್. ನರಸಿಂಹಮೊರ್ತಿ,ಬಿ.ಎನ್. ಲಕ್ಷ್ಮೀಪತಿ, ಪಿ.ಯು. ಪಾಪಣ್ಣ, ಕೆ.ಎಲ್. ಸೌಭಾಗ್ಯ, ಎಂ.ಜಿ. ಶ್ರೀನಿವಾಸಮೂರ್ತಿ, ಡಿ.ಇ. ರವಿಕುಮಾರ್, ಎಂ.ಕೆ.ನಂಜುಂಡಯ್ಯ, ಜಿ.ರಾಜಣ್ಣ, ಎನ್. ಮಲ್ಲೇಗೌಡ, ನಾಗರಾಜಗೌಡ ಮೊದಲಾದವರು ಇದ್ದರು. ಮೈತ್ರಿ ಮಹಿಳಾ ಮಂಡಳಿಯವರು ಪ್ರಾರ್ಥಿಸಿದರು. ಎಂ.ಕೆ. ನಂಜುಂಡಯ್ಯ ಸ್ವಾಗತಿಸಿ ಉಪನ್ಯಾಸಕ ನಾಗರಾಜು ನಿರೂಪಿಸಿ ಎಂ. ಶ್ರೀಧರ ವಂದಿಸಿದರು.