ವಾಸವಿ- ಗಂಗಾ ಯೋಜನೆಗೆ ಚಾಲನೆ
ಕ.ಪ್ರ. ವಾರ್ತೆ ತುಮಕೂರು ಜು.20
ತುಮಕೂರಿನ ವೈಶ್ಯ ಕೋ- ಆಪರೇಟಿವ್ ಬ್ಯಾಂಕ್ ವತಿಯಿಂದ ಉಚಿತ ಶುದ್ಧ ಕುಡಿಯುವ ನೀರಿನ ವಾಸವಿ ಗಂಗಾ ಯೋಜನೆ ಲೋಕಾರ್ಪಣಾ ಸಮಾರಂಭ ಬ್ಯಾಂಕಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಯೋಜನೆ ಜಾರಿ ಕುರಿತಂತೆ ಮಾತನಾಡಿದ ವೈಶ್ಯ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಸ್. ಆರ್. ಶ್ರೀಧರಮೂರ್ತಿ, 3 ತಿಂಗಳ ಮುಂಚೆಯೇ ಯೋಜನೆ ಜಾರಿಗೆ ನಿರ್ಧರಿಸಲಾಗಿತ್ತು. ಚುನಾವಣೆ ಮತ್ತಿತರೆ ಕಾರಣಗಳಿಂದಾಗಿ ಮುಂದಕ್ಕೆ ಹೋಗಿತ್ತು. ಸುಮಾರು 50 ಲಕ್ಷ ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಸರ್ಕಾರದ ಸಿಎ ಸೈಟ್ನಲ್ಲಿ ಬೋರ್ವೆಲ್ ಕೊರೆಸಲಾಗಿದ್ದು, 3 ನೀರಿನ ಲಾರಿ ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ, ಸಮಸ್ಯೆ ಇರುವ ಕಡೆ ನೀರು ಪೂರೈಸಲಾಗುವುದು. ನಗರಸಭೆ ಜತೆ ಹೊಂದಾಣಿಕೆ ಮಾಡಿಕೊಂಡು ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು. ಬ್ಯಾಂಕ್ ವತಿಯಿಂದ ಯಾವುದಾದರೂ ನೆನಪಿನಲ್ಲಿಳಿಯುವಂತಹ ಸಮಾಜ ಸೇವಾ ಕೆಲಸ ಮಾಡಬೇಕು ಅಂದುಕೊಂಡಿದ್ದೆವು. ಮಾಜಿ ಸಚಿವ ಸೊಗಡು ಶಿವಣ್ಣನವರ ಮಾರ್ಗದರ್ಶನದಂತೆ ಈ ವಾಸವಿ ಗಂಗಾ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಶ್ರೀಧರಮೂರ್ತಿ ತಿಳಿಸಿದರು.
ಹಾಲಿ ಸಿಎ ಸೈಟ್ ಬೋರ್ವೆಲ್ ಬಳಕೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಮತ್ತೊಂದು ಸಿಎ ಸೈಟ್ ನೀಡುವಂತೆ ಶಾಸಕ ಡಾ. ರಫೀಕ್ ಅಹಮದ್ ಅವರಿಗೆ ಮನವಿ ಮಾಡಿದರು.
ಸಮಸ್ಯೆ ಇದೆ: ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ವೈಶ್ಯ ಕೋ- ಆಪರೇಟಿವ್ ಬ್ಯಾಂಕ್ ಪುಣ್ಯದ ಕೆಲಸಕ್ಕೆ ಕೈ ಹಾಕಿದೆ. ನಾನು 4 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೆ. ತಮ್ಮ ಅವಧಿಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದೆ. ಆದರೂ ನೀರಿನ ಸಮಸ್ಯೆ ಇದ್ದೇ ಇದೆ. ನಗರದ 35 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇದೆ. ಬ್ಯಾಂಕಿನ ಧರ್ಮನಿಧಿಯಲ್ಲಿ ಈ ಯೋಜನೆ ಜಾರಿಗೊಳಿಸಿರುವುದು ನಿಜಕ್ಕೂ ಶ್ಲಾಘನೀಯ. ತಾವೂ ವೈಶ್ಯ ಕೋ- ಆಪರೇಟಿವ್ ಬ್ಯಾಂಕ್ನ ಗ್ರಾಹಕರಾಗಿರುವುದಾಗಿ ಸೊಗಡು ತಿಳಿಸಿದರು.
ಪುಣ್ಯದ ಕೆಲಸ: ಮುಖ್ಯ ಅತಿಥಿಯಾಗಿದ್ದ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ ಮಾತನಾಡಿ, ಶುದ್ಧ ಕುಡಿಯುವ ನೀರೊದಗಿಸುವುದು ಪುಣ್ಯದ ಕೆಲಸ. ಗ್ರಾಮೀಣ ಭಾಗದ ಜನರ ನೀರಿನ ಬವಣೆ ವಿಪರೀತವಾಗಿದೆ. ಹೇಮಾವತಿ ನೀರಿದ್ದರೂ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಹಾಲಿ ಜನಸಂಖ್ಯೆ ಸ್ಫೋಟ ನೋಡಿದರೆ ನೀರೊದಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ತುಮಕೂರು ನಗರದಲ್ಲಿ ಹಾಲಿ 3 ಲಕ್ಷ 5 ಸಾವಿರ ಜನಸಂಖ್ಯೆಯಿದೆ. ಎಷ್ಟೇ ನೀರು ಹರಿಸಿದರೂ ನೀರಿನ ಕೊರತೆ ಇದ್ದೇ ಇದೆ. ವಾಸವಿ ಗಂಗಾ ಉಚಿತ ಶುದ್ಧ ಕುಡಿಯುವ ನೀರಿನ ಯೋಜನೆ ಐತಿಹಾಸಿಕ ಎಂದು ಬಣ್ಣಿಸಿದರು. ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯುಂಟಾಗಿ 15- 20 ದಿವಸಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡಲ್ಲಿ ನೀರಿನ ಬವಣೆ ತಪ್ಪುತ್ತದೆ. ಜತೆಗೆ ಏರುತ್ತಿರುವ ಜನಸಂಖ್ಯೆ ಕುರಿತು ಡಾ. ರಫೀಕ್ ಅಹಮದ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ವೈಶ್ಯ ಕೋ- ಆಪರೇಟಿವ್ ಬ್ಯಾಂಕ್ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಏರುತ್ತಿರುವ ಜನಸಂಖ್ಯೆ ಕುರಿತು ಆತಂಕ ವ್ಯಕ್ತಪಡಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಟಿ.ಎಸ್. ಶಶಿಕುಮಾರ್, ಕನ್ಯಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಸಿ.ಎ. ಸೋಮೇಶ್ವರ ಗುಪ್ತ, ವಾಸವಿ ಯುವಜನ ಸಂಘದ ಅಧ್ಯಕ್ಷ ಬಿ. ಅಮರನಾಥ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ಶೇಷಣ್ಣ, ಲತಾ ಶ್ರೀವಾಸ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ, ನಿರ್ದೇಶಕರು ಇದ್ದರು.