ಸಿದ್ದು ಎಷ್ಟು ದಿನ ಇರ್ತಾರೋ ಗೊತ್ತಿಲ್ಲ: ಲಿಂಬಾವಳಿ
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷ ಆಡಳಿತಗಾರ. ಹಾಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ, ಅವರು ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾರ್ಮಿಕವಾಗಿ ನುಡಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಆಂತರಿಕ ಘಟನಾವಳಿ ಅವಲೋಕಿಸಿದರೆ ಮೇಲಿನ ಅನುಮಾನ ಮೂಡುವುದು ಸಹಜ ಎಂದು ಲಿಂಬಾವಳಿ ವಿಶ್ಲೇಷಿಸಿದರು. ಪಕ್ಷ ವಿಭಜನೆಯಿಂದ ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು. ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಯಡಿಯೂರಪ್ಪ ಸೇರಿದಂತೆ ಪಕ್ಷ ಬಿಟ್ಟು ಹೋಗಿರುವವರನ್ನು ಸೇರಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ. ಮತ್ತೆ ಬಿಜೆಪಿ ಮತ ಬ್ಯಾಂಕ್ಅನ್ನು ಒಗ್ಗೂಡಿಸುವ ತುರ್ತಿದೆ ಎಂದು ಒಪ್ಪಿಕೊಂಡರು. ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.