ನವದಂಪತಿಗಳಿಗೆ ಸ್ಪರ್ಧೆ
ಚಿಕ್ಕನಾಯಕನಹಳ್ಳಿ: ಹಿಂದು ಸಂಸ್ಕೃತಿಯಲ್ಲಿ ವಿವಾಹ ಬಂಧನಕ್ಕೆ ಹೆಚ್ಚಿನ ಮಹತ್ವವಿದ್ದು, ದಂಪತಿಗಳು ಪರಸ್ಪರ ಅರಿತರೆ ಜೀವನ ಸರಾಗವಾಗಿ ಸಾಗುತ್ತದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ನುಡಿದರು.
ಭಾನುವಾರ ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ದಿವ್ಯಜ್ಯೋತಿ ಕಲಾಸಂಘದ ವತಿಯಿಂದ ಏರ್ಪಡಿಸಿದ್ದ ನವದಂಪತಿ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಲ ಬದಲಾದಂತೆ ನಮ್ಮ ಕುಟುಂಬಗಳು ಸಂಕೀರ್ಣವಾಗುತ್ತಿವೆ. ಪರಸ್ಪರ ನಂಬಿಕೆಗಳಿಲ್ಲದೇ ಜ್ಞಾನದ ಭಂಡಾರದಂತಿರುವ ಹಿರಿಯ ಜೀವಗಳನ್ನು ನಿರ್ಲಕ್ಷಿಸುತ್ತಿದ್ದು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಇಲ್ಲದಂತಾಗಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ ಮರಳಿ ವೈಭವ ಪಡೆಯಬೇಕು. ನಮ್ಮ ಯುವಕ ಯುವತಿಯರು ಐಷಾರಾಮಿ ಜೀವನಕ್ಕೆ ಆಸೆಪಡದೆ ಇದ್ದುದರಲ್ಲೇ ಜೀವನ ಸಾಗಿಸಬೇಕು. ಇಲ್ಲದ ಶ್ರೀಮಂತಿಕೆಗೆ ಕೊರಗುವ ಬದಲು ಇರುವುದರಲ್ಲೇ ತೃಪ್ತಿ ಪಡೆಯಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ರಮೇಶ್ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಇಂತಹ ಕಾರ್ಯಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯಲಿ ಎಂದರು. ಬ್ಯಾಂಕ್ ನಿರ್ದೇಶಕ ಸಿ.ಎಸ್. ನಟರಾಜ್, ದಿವ್ಯಜ್ಯೋತಿ ಕಲಾಸಂಘದ ಗೌರವ ಅಧ್ಯಕ್ಷ ಗುರುಲಿಂಗಯ್ಯ, ಚಿ.ನಿ.ಪುರುಷೋತ್ತಮ, ರೇಣುಕಾ ಸ್ಟುಡಿಯೋ ಜಯಣ್ಣ ಮುಂತಾದವರಿದ್ದರು. ಸಿ.ಎಚ್.ಪ್ರಕಾಶ್ ಸ್ವಾಗತಿಸಿ, ಸಿದ್ದು. ಜಿ.ಕೆರೆ ನಿರೂಪಿಸಿದರು. ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ವಂದಿಸಿದರು. ಎಂ.ಸಿ.ಕಲ್ಲೇಶ್ ಪ್ರಾರ್ಥಿಸಿದರು. ತೀರ್ಪುಗಾರರಾಗಿ ವನಜಾರಾಜು, ಹೇಮಲತಾ ರೇವಣ್ಣ, ವನಿತಾ, ಇಂದುಶೇಖರ್ ಇದ್ದರು.