ವೆಬ್ಸೈಟ್ನಲ್ಲಿ ಪ್ರಕಟ
ತುಮಕೂರು: ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಮಾಡಲು ಅರ್ಹ ಲೆಕ್ಕ ಪರಿಶೋಧಕರ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಎಲ್ಲಾ ಸಹಕಾರ ಸಂಘಗಳು ಈ ಪಟ್ಟಿಯ ಪ್ರಕಾರವಾಗಿ ತಮ್ಮ ಸಂಸ್ಥೆಯ ಲೆಕ್ಕಪರಿಶೋಧನೆಯನ್ನು ನಿರ್ವಹಿಸುವಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಬರುವ ಪೆನುಕೊಂಡ, ಧರ್ಮಾವರಂ ಮತ್ತು ಅನಂತಪುರಂನಲ್ಲಿ ಜುಲೈ 23, 24 ಮತ್ತು 31 ರಂದು ಗ್ರಾಮಪಂಚಾಯತಿ ಚುನಾವಣೆ ನಡೆಯುವ ಸಂಬಂಧ ಚುನಾವಣೆ ದಿನಾಂಕದ 48 ಗಂಟೆಗಳ ಮೊದಲು ಚುನಾವಣೆ ನಡೆಯುವ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಗಡಿ ಪ್ರದೇಶದ ತುಮಕೂರು ಜಿಲ್ಲೆಯ 10 ಕಿ.ಮೀ. ತ್ರಿಜ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯವಹಿವಾಟುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಆದೇಶಿಸಿದ್ದಾರೆ.
ಸಹಕಾರ ಸಂಘಗಳಿಗೆ
ಚುನಾವಣೆ
ಸಹಕಾರ ಸಂಘಸಂಸ್ಥೆಗಳ ಚುನಾವಣೆ ನಡೆಸಲು ತುಮಕೂರು ಜಿಲ್ಲಾ ಸಹಕಾರ ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರು, ತುಮಕೂರು ಜಿಲ್ಲೆ ಇವರನ್ನು ನೇಮಕ ಮಾಡಿ ಸಹಕಾರ ಚುನಾವಣಾ ಆಯುಕ್ತರು ಆದೇಶಿಸಿದ್ದಾರೆ. ಚುನಾವಣಾ ಆಯುಕ್ತರ ಅಧಿಸೂಚನೆ ಪ್ರಕಾರ ಜಿಲ್ಲೆಯಲ್ಲಿನ ಕೆಳಕಂಡ ವಿವಿಧ ಸಹಕಾರ ಸಂಘಗಳಿಗೆ 4 ಹಂತಗಳಲ್ಲಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆಗಸ್ಟ್ 25 ರಂದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸೆ.1 ರಂದು, ಇತರೆ ಸಹಕಾರ ಸಂಘಗಳು (ಕೃಷಿಯೇತರ ಪತ್ತಿನ ಸಹಕಾರ ಸಂಘಗಳು) ಅರ್ಬನ್ ಬ್ಯಾಂಕ್ಗಳು ಮತ್ತು ಇತರೆ ಪತ್ತಿನ ಸಹಕಾರ ಸಂಘಗಳಿಗೆ ಸೆ.7 ಮತ್ತು 8 ರಂದು, ಇತರೆ ಸಹಕಾರ ಸಂಘಗಳು (ಗ್ರಾಹಕರ ಸಂಘಗಳು), ಇನ್ನಿತರೆ ಎಲ್ಲಾ ಪತ್ತೇತರ ಸಹಕಾರ ಸಂಘಗಳಿಗೆ ಸೆ.15 ರಂದು ಚುನಾವಣೆ ನಡೆಯಲಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ತುಮಕೂರು, ತಿಪಟೂರು ಮತ್ತು ಮಧುಗಿರಿ ಉಪವಿಭಾಗ ಹಾಗೂ ತುಮಕೂರು ಹಾಲು ಒಕ್ಕೂಟದ ಅಧಿಕಾರಿ ನೌಕರರನ್ನೊಳಗೊಂಡ ತಂಡ ರಚನೆ ಮಾಡಿ ಸದರಿ ಆದೇಶವನ್ನು ಎಲ್ಲರಿಗೂ ಕಳುಹಿಸಿಕೊಡಲಾಗಿದ್ದು, ತಾತ್ಕಾಲಿಕ ಮತದಾರರ ಪಟ್ಟಿಯನ್ನು ಪ್ರಕಟಿಸಲು ಸಹ ಸದರಿ ಆದೇಶದಲ್ಲಿ ತಿಳಿಸಲಾಗಿದೆ.
3 ತಿಂಗಳಿಂದ ನೀರಿನ ಬವಣೆ
ಹೆಬ್ಬೂರು: ಹೆಬ್ಬೂರು ಹೋಬಳಿ ಕಣಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗರುಗನಕುಪ್ಪೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಗ್ರಾಮಸ್ಥರು, ರೈತರು ಅಳಲು ತೋಡಿಕೊಂಡಿದ್ದಾರೆ.