ವ್ಯವಸ್ಥೆಯ ವಿರುದ್ಧ ಚಳವಳಿಗಳು ನಿರಂತರವಾಗಿರಲಿ: ದೊರೈರಾಜು
ಕ.ಪ್ರ. ವಾರ್ತೆ ತುಮಕೂರು ಜು.21
ವ್ಯವಸ್ಥೆಯ ವಿರುದ್ಧ ಚಳವಳಿಗಳು ನಿರಂತರವಾಗಿ ಇರಬೇಕು ಎಂದು ಚಿಂತಕ ಕೆ. ದೊರೈರಾಜು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಎಂಪ್ರೆಸ್ ಪ.ಪೂ. ಕಾಲೇಜಿನಲ್ಲಿ ನಡೆದ ಡಿವೈಎಫ್ಐ ಜಿಲ್ಲಾ ಸಂಘಟನಾ ಸಮಾವೇಶ
ಉದ್ಘಾಟಿಸಿ ಮಾತನಾಡಿದರು.
ಪ್ರಭುತ್ವ ತನ್ನ ಬೇರುಗಳನ್ನು ದೊಡ್ಡ ಮಟ್ಟದಲ್ಲಿ ಚಾಚಿದೆ. ಕ್ರೌರ್ಯಗಳ ವಿರುದ್ಧ ಮಾತನಾಡಬೇಕಾದರೆ ಚಳವಳಿಗಳು ನಿರಂತರವಾಗಿ ಇರಬೇಕು. ಆಗ ಮಾತ್ರ ಪ್ರಭುತ್ವವನ್ನು ಮಣಿಸಲು ಸಾಧ್ಯ ಎಂದು ತಿಳಿಸಿದರು.
ಬಹಳಷ್ಟು ಯುವಕರು ಈ ವಯಸ್ಸಿನಲ್ಲಿ ಮನರಂಜನೆಯಲ್ಲಿ ತೊಡಗುತ್ತಾರೆ. ಸಮಾಜದಲ್ಲಿ ದಬ್ಬಾಳಿಕೆ ಕ್ರೌರ್ಯ, ಶೋಷಣೆ ಎಲ್ಲವೂ ಕೂಡ ಕೇವಲ ಬೆರಳಿಕೆಯಷ್ಟು ವಿದ್ಯಾರ್ಥಿಗಳು ಖಂಡಿಸುತ್ತಾರೆ. ಸಮಾಜಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಇರುತ್ತಾರೆ ಇದು ಸರಿಯಲ್ಲ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಜನರ ಮೂಲ ಕಸುಬುಗಳನ್ನು ಕಸಿಯುವಂತಹ ಕೆಲಸವನ್ನು ಸರ್ಕಾರಗಳು ವ್ಯವಸ್ಥಿತವಾಗಿ ನಡೆಸುತ್ತಿದ್ದು ಕಾರ್ಪೋರೇಟ್ ಕಂಪನಿಗಳು ಮತ್ತು ರಿಯಲ್ ಎಸ್ಟೇಟ್ ದಂಧೆಗಳಿಗೆ ರೈತರ ಭೂಮಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.
ಶಿಕ್ಷಣ ನೀಡಿಲ್ಲ: ಸ್ವತಂತ್ರ್ಯ ಬಂದು ಅರ್ಧ ಶತಮಾನ ಮೀರಿದರೂ ಸಹ ಎಲ್ಲರಿಗೂ ಶಿಕ್ಷಣವನ್ನು ಸರ್ಕಾರ ನೀಡಿಲ್ಲ. ಎಷ್ಟೋ ಹಳ್ಳಿಗಳು ಅಕ್ಷರವನ್ನು ತಿಳಿಯದೇ ಅನಕ್ಷರಸ್ಥರಾಗಿ ಉಳಿದಿದ್ದಾರೆ. ಇದಕ್ಕೆ ಬಂಡವಾಳಶಾಹಿ ವ್ಯವಸ್ಥೆಯೇ ಪ್ರಮುಖ ಕಾರಣ ಎಂದರು. ಉನ್ನತ ಮತ್ತು ಪ್ರಾಥಮಿಕ ಶಿಕ್ಷಣಗಳು ವ್ಯಾಪಾರೀಕರಣವಾಗುತ್ತಿದ್ದು ಅದರಲ್ಲೂ ಉನ್ನತ ಶಿಕ್ಷಣವನ್ನು ಪಡೆದ ಶ್ರೀಮಂತರು ಭ್ರಷ್ಟಾಚಾರಿಗಳಾಗುತ್ತಿದ್ದಾರೆ ಎಂದರು.
ಎಲ್ಲರಿಗೂ ಸಮಾನತೆ ನೀಡುವ ಅವಕಾಶ ಇಲ್ಲದಂತಾಗಿದೆ. ಇವುಗಳಿಂದ ಬಿಡುಗಡೆ ಹೊಂದಬೇಕಾದರೆ ಹೋರಾಟಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವೆಲ್ಲವನ್ನು ಗಮನಿಸಿದಾಗ ಮೋಜು ಮಾಡುವ ಮಂದಿಗೆ ಈ ಜಗತ್ತಿನ ಕ್ರೌರ್ಯ ತಟ್ಟಿಲ್ಲ ಎನ್ನಬಹುದು ಎಂದರು.
ಕ್ರೌರ್ಯಕ್ಕೆ ಒಳಗಾಗುತ್ತಿದ್ದಾರೆ: ಉದ್ಯೋಗ ಮಾಡಬೇಕಾದ ಯುವಕರು ಉದ್ಯೋಗವಿಲ್ಲದೆ ಜಾತಿ ಸಂಘಟನೆಗಳು, ಧರ್ಮ ಸಂಘಟನೆಗಳು, ಒಂದಲ್ಲಾ ಒಂದು ಕ್ರೌರ್ಯಕ್ಕೆ ಒಳಗಾಗುತ್ತಿದ್ದಾರೆ. ಎಡಪಂಥೀಯ ಚಿಂತನೆಗಳನ್ನು ಹೆಚ್ಚಾದರೆ ಮಾತ್ರ ವ್ಯವಸ್ಥೆಯ ಬದಲಾವಣೆ ಸಾಧ್ಯ ಎಂದರು. ಪ್ರತಿಯೊಬ್ಬರಿಗೂ ಬೇಕಾದ ಸಮಾನತೆ ರೂಪಿಸಲು ಎಡಪಂಥೀಯ ಚಿಂತನೆಗಳಿಂದ ಮಾತ್ರ ಸಾಧ್ಯ ಎಂದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ ದೇಶದ ಸ್ವಾತಂತ್ರ್ಯ ಮತ್ತು ಸಮಾನತೆಯ ಹೋರಾಟಗಳಲ್ಲಿ ಹೆಚ್ಚು ಯುವಕರೇ ಭಾಗವಹಿಸಿರುವುದು ಪ್ರಮುಖವಾಗಿ ನೋಡಬಹುದಾಗಿದೆ. ಇವರಿಗೆ ತಿಳುವಳಿಕೆಯನ್ನು ಅಂದಿನ ಶಿಕ್ಷಣ ನೀಡಿತ್ತು. ಆದರೆ ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ದೇಶದ ಅಭಿವೃದ್ಧಿ ಮತ್ತು ಶೋಷಣೆ ವಿರುದ್ಧ ಮಾತನಾಡುವಂತೆ ಪಠ್ಯ ಕ್ರಮಗಳೇ ಇಲ್ಲದಂತಾಗಿದೆ ಎಂದರು.
ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ರೈತರ ಭೂಮಿ ಕಸಿದು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಹುನ್ನಾರ ಬಿಟ್ಟರೆ ಯುವಜನರಿಗೆ ಬೇಕಾದಂತೆ ಉದ್ಯೋಗ ಸೃಷ್ಟಿಸುವಂತಹ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದರು. ರಾಜ್ಯದಲ್ಲಿ 5 ಲಕ್ಷ ಯುವಕರು ಕಡಿಮೆ ಆಧಾಯ ಮತ್ತು ಸೇವಾ ಅಭದ್ರತೆಯಿಂದ ದುಡಿಯುತ್ತಿದ್ದು ಇಂತಹವರಿಗೆ ಉದ್ಯೋಗ ನೀಡುವಂತಹ ಯಾವ ಕಾರ್ಯಕ್ರಮಗಳು ಇಲ್ಲ ಎಂದರು.