ಚರಂಡಿ ದುರಸ್ತಿಗೆ ಆಗ್ರಹ
ಕ.ಪ್ರ.ವಾರ್ತೆ , ಪಾವಗಡ , ಜು.23
ಪುರಸಭೆ ಮುಖ್ಯಾಧಿಕಾರಿ ಹಾಗೂ ಗುತ್ತಿಗೆದಾರರೊಬ್ಬರ ನಿರ್ಲಕ್ಷ್ಯದಿಂದ ಕಳೆದ 15 ದಿನಗಳಿಂದ ಪಟ್ಟಣದ ತೋಟಗಾರಿಕೆ ಇಲಾಖೆ ಮುಂದೆ ಚರಂಡಿ ನೀರು ನಿಂತು ದುರ್ನಾತ ಬೀರುತ್ತಿದೆ. ಅಲ್ಲದೆ, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ ಎಂದು ಪಟ್ಟಣದ ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಿಂದ ತಾ.ಕಚೇರಿ ಮುಂಭಾಗದಲ್ಲಿ ಹಾದು ಹೋಗುವ ಚರಂಡಿ ದುರಸ್ತಿಗೆ ಪ್ರಸಕ್ತ ಸಾಲಿನಲ್ಲಿ ಪುರಸಭೆಯಿಂದ ಲಕ್ಷಾಂತರ ರು.ಗಳ ಟೆಂಡರ್ ಆಗಿದ್ದು, ದುರಸ್ತಿಯ ಗುತ್ತಿಗೆ ಪಡೆದ ಗುತ್ತಿಗೆದಾರರು ಚರಂಡಿಯ ಮೇಲೆ ಇದ್ದ ಫುಟ್ಪಾತ್ ಅಂಗಡಿ ತೆರವುಗೊಳಿಸಿ ಅರ್ಧಂಬರ್ಧ ಚರಂಡಿ ದುರಸ್ತಿ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಯಂತೆ ಚರಂಡಿ ದುರಸ್ತಿಯನ್ನು ಪ್ರವಾಸಿ ಮಂದಿರದಿಂದ ತಾ. ಕಚೇರಿ ಮುಂಭಾಗ ಸೇರಿದಂತೆ ದೊಡ್ಡ ಚರಂಡಿಯ ಲಿಂಕ್ಗೆ ದುರಸ್ತಿ ಮಾಡುವ ಪ್ರಕ್ರಿಯೆ ಇದೆ. ಆದರೆ, ಮುಖ್ಯಾಧಿಕಾರಿ ಹಾಗೂ ಚರಂಡಿ ದುರಸ್ತಿ ಗುತ್ತಿಗೆ ಪಡೆದ ಗುತ್ತಿಗೆದಾರರು ಜೆಸಿಬಿಯಿಂದ ತೋಟಗಾರಿಕೆ ಇಲಾಖೆವರೆಗೆ ಚರಂಡಿ ದುರಸ್ತಿಪಡಿಸಿ ಕೈತೊಳೆದುಕೊಂಡ ಕಾರಣ ಪಟ್ಟಣದ ಚರಂಡಿ ನೀರೆಲ್ಲ ರಸ್ತೆ ಮೇಲೆ ನಿಂತಿದೆ. ಪಟ್ಟಣದಲ್ಲಿ ಬಿಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದೆ.ಚರಂಡಿಯ ಪಕ್ಕದಲ್ಲಿಯೇ ಚಳ್ಳಕೆರೆ ಮಾರ್ಗದ ಪ್ರಮುಖ ರಸ್ತೆ ಇದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಕೂಡಲೇ ಚರಂಡಿ ದುರಸ್ತಿಪಡಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.