ಬಾಬಾ ಮಂದಿರದಲ್ಲಿ ವಿಶೇಷ ಪೂಜೆ
ಸೂಲಿಬೆಲೆ: ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸೂಲಿಬೆಲೆ ಮಧ್ಯ ಭಾಗದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದ ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಗುರು ಪೂರ್ಣಮೆ ಅಂಗವಾಗಿ ನಾನಾ ಪೂಜಾ ಕಾರ್ಯಕ್ರಮ ನಡೆಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.
ಈ ಬಾರಿಯೂ ಹೋಮ, ಹವನ, ಬಾಬಾ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸೂಲಿಬೆಲೆ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮಗಳ ಭಕ್ತರು ಬಾಬಾ ದರ್ಶನ ಪಡೆದರು.
ಅನಿಲ್ಕುಮಾರ್ ನೇಮಕ
ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಗಾಂಧಿನಗರದ ಜೆ.ಅನಿಲ್ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜೇಶ್ ದೊಡ್ಮನೆ ತಿಳಿಸಿದ್ದಾರೆ.
ಸಂಘಟನಾ ವೀರ ಪ್ರಶಸ್ತಿ
ತುಮಕೂರು: ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ಅವರಿಗೆ ಸಂಘಟನಾ ವೀರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮಿಗಳು ಈ ಸಂಘಟನಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪೆಟ್ರೋಲ್ ದರ ಇಳಿಕೆಗೆ ಆಗ್ರಹ
ತುಮಕೂರು: ಕೇಂದ್ರ ಯುಪಿಎ ಸರ್ಕಾರ ಹೆಚ್ಚಿಸಿರುವ ಪೆಟ್ರೋಲ್ ದರವನ್ನು ಕೂಡಲೇ ಇಳಿಸಬೇಕೆಂದು ಬಿಎಸ್ಬಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರ ಪದೇ- ಪದೇ ಪೆಟ್ರೋಲ್ ಮತ್ತಿತರೆ ಇಂಧನ ವಸ್ತುಗಳ ಬೆಲೆ ಏರಿಸಿ, ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸವಲತ್ತು ಮಾಹಿತಿ ಕಾರ್ಯಕ್ರಮ
ತುಮಕೂರು: ಇಲ್ಲಿನ ಜಾತ್ಯತೀತ ಮಾನವ ವೇದಿಕೆ ವತಿಯಿಂದ ವಿವಿಧ ಇಲಾಖೆಗಳಲ್ಲಿರುವ ಸವಲತ್ತು ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವೇದಿಕೆ ಅಧ್ಯಕ್ಷ ಟಿ.ಆರ್. ಆಂಜನಪ್ಪ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್.ಕೆ. ರಂಗಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೆಎಸ್ಎಫ್ಸಿ, ಹಿಂದುಳಿದ ವರ್ಗಗಳ ಇಲಾಖೆ ಮತ್ತಿತರೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಜಾತ್ಯತೀತ ಮಾನವ ವೇದಿಕೆ ಪ್ರಧಾನ ಕಾರ್ಯದರ್ಶಿ ಟಿ.ಆರ್. ವೀರಭದ್ರಯ್ಯ, ಸಂಘಟನಾ ಕಾರ್ಯದರ್ಶಿ ಎಂ. ವೀರಭದ್ರಯ್ಯ, ಮುಸ್ತಾಕ್ ಅಹಮದ್, ರಂಗಸ್ವಾಮಿ, ವಿಶ್ವನಾಥ್ ಇತರರು ಉಪಸ್ಥಿತರಿದ್ದರು.
ಲಲಿತಾ ಲಕ್ಷಾರ್ಚನೆ
ದೊಡ್ಡಬಳ್ಳಾಪುರ: ಇಲ್ಲಿನ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಲಿತಾ ಲಕ್ಷಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಚೌಡೇಶ್ವರಿ ಮಹಿಳಾ ಸಂಘ ಜು.26ರಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಬೆಳಗ್ಗೆ 9.30ರಿಂದ ಪೂಜಾ ಕಾರ್ಯಕ್ರಮ, ಲಕ್ಷಾರ್ಚನೆ ಆರಂಭಗೊಳ್ಳಲಿದೆ. ಸುಮಂಗಲಿಯರಿಂದ ನೆರವೇರುವ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಭಾಗವಹಿಸಬೇಕೆಂದು ಮಹಿಳಾ ಸಂಘ ಕೋರಿದೆ. ಮ.12.30ಕ್ಕೆ ಮಹಾ ಮಂಗಳಾರತಿ ನೆರವೇರಲಿದ್ದು, ಸಂಜೆ 7 ಗಂಟೆಗೆ ಚೌಡೇಶ್ವರಿ ಅಮ್ಮನವರಿಗೆ ಉಯ್ಯಾಲೋತ್ಸವ ನೆರವೇರಲಿದೆ.
ತಾಲೂಕು ಕೇಂದ್ರಕ್ಕಾಗಿ ಆಗ್ರಹ
ಕುಣಿಗಲ್: ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಹುಲಿಯೂರುದುರ್ಗವು ತಾಲೂಕು ಕೇಂದ್ರವಾಗುವ ಎಲ್ಲಾ ಲಕ್ಷಣಗಳಿದ್ದು, ಹಲಿಯೂರುದುರ್ಗವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹುಲಿಯೂರುದುರ್ಗ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್. ಹೊನ್ನೇಗೌಡ ತಿಳಿಸಿದರು.
ಮಂಗಳವಾರ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಪಟ್ಟಣಕ್ಕೆ ಆಗಮಿಸಿ ವಿವರ ನೀಡಿದ ಅವರು, ಹುಲಿಯೂರುದುರ್ಗ ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ, 1874ರಲ್ಲಿ ಹುಲಿಯೂರುದುರ್ಗ ತಾಲೂಕು ಕೇಂದ್ರವಾಗಿದ್ದು, ನಂತರದ ತಾಲೂಕು ಕೇಂದ್ರದಿಂದ ಕೈಬಿಡಲಾಗಿ ಎಂದಿದ್ದಾರೆ.
ವಿಚಿತ್ರ ಕರು ಜನನ
ಕ.ಪ್ರ.ವಾರ್ತೆ , ಕುಣಿಗಲ್ , ಜು. 23
ತಾಲೂಕಿನ ಹುಲಿಯೂರುದುರ್ಗದ ಅಂಬೇಡ್ಕರ್ ನಗರದ ವಾಸಿಬೆಟ್ಟಪ್ಪ ಎಂಬವರ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ನಾಟಿ ಹಸುವೊಂದು ವಿಚಿತ್ರ ಹೆಣ್ಣುಕರುವಿಗೆ ಜನ್ಮ ನೀಡಿದ್ದು, ಕರು ಆರೋಗ್ಯದಿಂದ ಇದೆ.
ಎರಡು ಬಾಯಿ, ಮೂರು ಕಣ್ಣು, ಎರಡು ನಾಲಿಗೆ ಮೂರು ಕಿವಿ ಇರುವ ಕರುವಿಗೆ ನಾಟಿ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಕರು ಜನಿಸಿದಾಗ ಮುಖ ನೋಡಿ ಆತಂಕಗೊಂಡ ಮಾಲೀಕ ನಂತರ ಗ್ರಾಮದ ಇತರರಿಗೂ ವಿಷಯ ತಿಳಿದು ತಂಡೋಪತಂಡವಾಗಿ ಜನರು ಬಂದು ವೀಕ್ಷಿಸಿದರು.
ನೌಕರರ ಸಂಘದ ನಿರ್ದೇಶಕರ ಆಯ್ಕೆ
ತಿಪಟೂರು: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿಯ 35 ನಿರ್ದೇಶಕರ ಸ್ಥಾನಗಳಿಗೆ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 13 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಅವಿರೋಧ ಆಯ್ಕೆಯಾದವರು: ಕೆ.ಎಂ.ರಾಜಣ್ಣ (ಜಲಾನಯನ ಇಲಾಖೆ), ಪಿ.ಶಂಕರಮೂರ್ತಿ(ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ), ಎಸ್.ಗೋಪಾಲಪ್ಪ (ಸಿಡಿಪಿಓ ಇಲಾಖೆ), ಕುಮಾರಸ್ವಾಮಿ (ತಾಪಂ), ಜೆ.ಎಂ.ಶಿವಾನಂದಪ್ಪ (ಮಾರುಕಟ್ಟೆ ಎಪಿಎಂಸಿ), ಎಸ್.ಆರ್. ತೋಂಟಾರಾಧ್ಯ (ಸರ್ವೇ), ವೈ.ಅಜ್ಜಯ್ಯ (ಐಟಿಐ), ಎಂ.ಬಸವಣ್ಣ (ಸಾರಿಗೆ), ಜೆ.ಕೆ.ಉಮಾಶಂಕರಯ್ಯ (ಕೈಗಾರಿಕೆ-ವಾಣಿಜ್ಯ), ಕೆ.ಮಂಜುನಾಥ್ (ಅಬಕಾರಿ), ವಿ.ಕಮಲಾನಂದ (ಕಾವೇರಿ ನೀರಾವರಿ ನಿಗಮ), ಜಿ.ನಾಗರಾಜಪ್ಪ (ಅರಣ್ಯ), ಕಾಳನಿಂಗಯ್ಯ (ಸಮಾಜ ಕಲ್ಯಾಣ), ಸಿ.ಜಿ.ಶಿವಕುಮಾರ್(ಪದವಿ ಕಾಲೇಜು), ಬ್ರಹ್ಮಚಾರಿ (ಜಿಪಂ), ನರಸಿಂಹಯ್ಯ (ಸಣ್ಣ ನೀರಾವರಿ), ಬಿ.ವಿ. ನಟರಾಜು (ಲೋಕೋಪಯೋಗಿ), ಕೆ.ಎಲ್. ಪರಮೇಶ್ವರಯ್ಯ (ಕಂದಾಯ), ಎಚ್.ಎಸ್. ಕಾಂತರಾಜು (ಕಂದಾಯ), ಎನ್. ರಂಗಸ್ವಾಮಿ (ಆಹಾರ), ಆರ್.ಚಂದ್ರಶೇಖರಯ್ಯ (ವಾಣಿಜ್ಯ ತೆರಿಗೆ) ಜಿ.ಸಿದ್ದಪ್ಪ (ಪಶುಸಂಗೋಪನೆ).
ಚುನಾವಣೆಯಲ್ಲಿ ಆಯ್ಕೆಯಾದವರು: ಯುವರಾಜ್ (ಯಾದವ್ ನಗರ ಆಸ್ಪತ್ರೆ), ಎಸ್.ಕೆ. ಶಂಕರನಾರಾಯಣ(ಬಿಸಿಎಂ), ಲಕ್ಷಣಪ್ಪ(ಪ್ರೌಢಶಾಲೆ),ಪ್ರಸನ್ನ ಕುಮಾರ್ (ಪದವಿಪೂರ್ವ ಶಿಕ್ಷಣ ಇಲಾಖೆ), ಮಾಲತೇಶ್ ತೋಟಗಾರಿಕೆ, ಶಿವಸ್ವಾಮಿ (ಕೃಷಿ), ಶಂಕರಪ್ಪ (ನ್ಯಾಯಾಂಗ), ಶಂಕರಯ್ಯ (ಆರೋಗ್ಯ), ಸರೋಜಮ್ಮ (ಆರೋಗ್ಯ), ಮೋಹನ್ಕುಮಾರ್ (ಆರೋಗ್ಯ), ರಮೇಶ್, ಜಯರಾಮ್, ಕುಮಾರ್,(ಪ್ರಾಥಮಿಕ ಶಿಕ್ಷಣ ಇಲಾಖೆ) ಆಯ್ಕೆಯಾಗಿದ್ದಾರೆ.
ಕಂಪ್ಯೂಟರ್ ತರಬೇತಿ
ಪಾವಗಡ: ರಾಜ್ಯ ವಿದ್ಯುನ್ಮಾನ, ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಮತ್ತು ಕಿಯೋನಿಕ್ಸ್ (ಸುದರ್ಶನ ಕಂಪ್ಯೂಟರ್ ತರಬೇತಿ ಕೇಂದ್ರ) ಪಾವಗಡ ಇವರ ವತಿಯಿಂದ ತಾ.ನಿರುದ್ಯೋಗಿ ವಿದ್ಯಾವಂತ ಅಭ್ಯರ್ಥಿಗಳಿಗಾಗಿ 6 ತಿಂಗಳ ಉಚಿತ ಕಂಪ್ಯೂಟರೈಸ್ಡ್, ಫ್ಯೆನಾನ್ಶಿಯಲ್ ಆಕೌಂಟಿಂಗ್ ಮತ್ತು ಟ್ಯಾಲಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜಾತಿ ಆದಾಯ ಪ್ರಮಾಣ ಪತ್ರ ಸೇರಿದಂತೆ ಇತ್ತೀಚಿನ ಸಂಬಂಧಪಟ್ಟ ಭಾವಚಿತ್ರ ಹಾಗೂ ಆಧಾರ್ ಕಾರ್ಡು ಅಥವಾ ಗುರುತಿನ ಚೀಟಿಯಾಗಲಿ ಅರ್ಜಿಯೊಂದಿಗೆ ಆ. 3ರೊಳಗೆ ತರಬೇತಿ ಕೇಂದ್ರಕ್ಕೆ ಸಲ್ಲಿಸಬೇಕು. ವಿವರಗಳಿಗೆ ಕಿಯೋನಿಕ್ಸ್ (ಸುದರ್ಶನ್ ಕಂಪ್ಯೂಟರ್) ತರಬೇತಿ ಕೇಂದ್ರ, ಬಳ್ಳಾರಿ ರಸ್ತೆ ಪಾವಗಡ, ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಮೊ. 9448951024, 08136, 245812, 244666.
ಚಿನ್ನಾಭರಣ ಕಳವು
ಕುಣಿಗಲ್: ತಾಯಿಗೆ ಹೃದಯಾಘಾತದವಾಗಿರುವ ವಿಷಯ ತಿಳಿದು, ಮನೆಗೆ ಬೀಗ ಹಾಕಿ ಮನೆಯವರೆಲ್ಲಾ ತಾಯಿನೋಡಲು ಹೋಗಿದ್ದ ವೇಳೆ ಕೈಚಳಕ ತೋರಿರುವ ಕಳ್ಳರು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಯಲಿಯೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರುದ್ರಯ್ಯ ಎಂಬವರ ತಾಯಿ ತುಮಕೂರಿನಲ್ಲಿದ್ದು, ಸೋಮವಾರ ಮಧ್ಯಾಹ್ನ ಇವರ ತಾಯಿಗೆ ಹೃದಯಾಘಾತವಾಗಿದೆ ಎಂದು ಸಂಬಂಧಿಕರು ತಿಳಿಸಿದ ಮೇರೆಗೆ ರುದ್ರಯ್ಯ ಕುಟುಂಬ ಸಮೇತ ತಮ್ಮ ತಾಯಿಯನ್ನು ನೋಡಲು ಹೋಗಿದ್ದರು. ಮಂಗಳವಾರ ಬೆಳಗ್ಗೆ ಯಲಿಯೂರಿಗೆ ಹಿಂದಿರುಗಿ ನೋಡಿದಾಗ, ಮನೆಗೆ ಹಾಕಿರುವ ಬೀಗ ಒಡೆದು ಬೀರುವಿನಲ್ಲಿದ್ದ ಒಂದು ಕಾಲು ಲಕ್ಷ ರು. ಮೌಲ್ಯದ ಒಟ್ಟಾರೆ 53 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ಕಂಡುಬಂದಿತು. ರುದ್ರಯ್ಯ ಅವರು ಕುಣಿಗಲ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.