ಸಂಪತ್‌ಕುಮಾರ್‌ಗೆ ರೋಟರಿಯಿಂದ ಸನ್ಮಾನ
ಕ.ಪ್ರ.ವಾರ್ತೆ , ತಿಪಟೂರು , ಜು. 23
ಪಟ್ಟಣದ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ 55ನೇ ರೋಟರಿ ಪದಗ್ರಹ ಸಮಾರಂಭದಲ್ಲಿ ನಗರಸಭೆಯ ಡಿ.ದರ್ಜೆಯ ಸರ್ಕಾರಿ ನೌಕರರಾದ ಸಂಪತ್‌ಕುಮಾರ್ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ನೂತನ ರೋಟರಿ ಅಧ್ಯಕ್ಷರಾದ ಎ.ನಟರಾಜು ಮಾತನಾಡಿ, ಸಂಪತ್‌ಕುಮಾರ್ ಅವರು ಸತ್ಯ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಕೆಂಪೇಗೌಡರವರ ಶತಮಾನೋತ್ಸವದಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೊಡುವ ಸರ್ವೋತ್ತಮ ಸೇವೆ ಪ್ರಶಸ್ತಿ ಹಾಗೂ ಆಗಿನ ಜಿಲ್ಲಾಧಿಕಾರಿ ಮತ್ತು ರಾಜೀವ್ ಗಾಂಧಿ ನಿಗಮ ಮಂಡಳಿಯವರು ಕೂಡ ಇವರಿಗೆ ಪ್ರಶಸ್ತಿ ನೀಡಿದ್ದು, ಇಂತಹ ಸಹೃದಯಿ ವ್ಯಕ್ತಿಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದ್ದು, ಇವರ ಪ್ರಾಮಾಣಿಕತೆ ಗುರುತಿಸಿ ರೋಟರಿ ವತಿಯಿಂದಲೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಡಿ.ಜಿ.ಯು.ಬಿ. ಭಟ್, ಅಸಿಸ್ಟೆಂಟ್ ಗೌರ್ನರ್‌ಶ್ರೀನಾಥ್‌ಬಾಬು, ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಕಾರ್ಯದರ್ಶಿ ವಿನಯ್, ಉಪಾಧ್ಯಕ್ಷ ಶಿವಶಂಕರ್, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಡಾ.ರಮೇಶ್‌ಬಾಬು ಸೇರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.