ಸೌಲಭ್ಯವಂಚಿತ ತೆಂಗಿನಪುಡಿ ಕಾರ್ಖಾನೆ ಕಾರ್ಮಿಕರು
ಕ.ಪ್ರ.ವಾರ್ತೆ , ಕುಣಗಲ್ , ಜು. 23
ತಾಲೂಕಿನ ಅಂಚೇಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿನ ತೆಂಗಿನಪುಡಿ ಮಾಡುವ ಕಾರ್ಖಾನೆಯಲ್ಲಿ ಒಂದು ದಶಕದಿಂದ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯ ನೀಡದೆ ವಂಚಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಕೂಡಲೆ ಕಾರ್ಮಿಕರಿಗೆ ನ್ಯಾಯಬದ್ಧ ಸವಲತ್ತು ದೊರಕಿಸಬೇಕೆಂದು ತಾಲೂಕು ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್ ಆಗ್ರಹಿಸಿದ್ದಾರೆ.
ಸೋಮವಾರ, ಕಾರ್ಖಾನೆಯ ಬಹಳಷ್ಟು ಕಾರ್ಮಿಕರು ಸದರಿ ಕಾರ್ಖಾನೆಯಲ್ಲಿ ತಮಗೆ ಕನಿಷ್ಠ ಕಾರ್ಮಿಕ ಸವಲತ್ತುಗಳು ದೊರಕದಿರುವ ಬಗ್ಗೆ ಸಂಘಟನೆಗೆ ಲಿಖಿತ ದೂರು ನೀಡಿದ ಮೇರೆಗೆ, ಸ್ಥಳಕ್ಕೆ ಸಂಘಟನೆಯ ಪದಾಧಿಕಾರಿಗಳು ಭೇಟಿ ನೀಡಿದಾಗ, ಸದರಿ ಕಾರ್ಖಾನೆಯಲ್ಲಿ ಐವತ್ತರಿಂದ ಅರವತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ಪೈಕಿ ಸುಮಾರು ಹದಿನೈದಕ್ಕೂ ಹೆಚ್ಚು ಮಂದಿ ಕಳೆದ ಹದಿನಾಲ್ಕು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಕನಿಷ್ಠ ಸವಲತ್ತುಗಳಾದ ಇಎಸ್‌ಐ, ಪಿಎಫ್ ಸೇರಿದಂತೆ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದು, ಮಹಿಳೆಯರಿಗೆ ಮೂಲ ಸೌಕರ್ಯಗಳಿಲ್ಲದಿರುವುದು ಕಂಡುಬಂದಿತು.
ಕಾರ್ಮಿಕರ ಪರವಾಗಿ ಮಾತನಾಡಿದ ರಂಗಸ್ವಾಮಿ ಎಂಬಾತ ಕಳೆದ ಹದಿನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇಎಸ್‌ಐ ಪಿಎಫ್ ಸೇರಿದಂತೆ ಕಾರ್ಮಿಕರ ಹಿತರಕ್ಷಣೆಯ ಹಲವು ಸವಲತ್ತು ನೀಡುವಂತೆ ಕಾರ್ಮಿಕ ನಿರೀಕ್ಷಕರಿಗೆ, ಕಾರ್ಖಾನೆ ಮಾಲೀಕರಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ನಿರೀಕ್ಷಕರಂತೂ ಬಂದರೆ ಕೇವಲ ಮಾಲೀಕರನ್ನು ಮಾತನಾಡಿಸಿ ಹೋಗುತ್ತಾರೆ ಹೊರತು ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಏನನ್ನೂ ತಿಳಿಸದೆ ತಮಗೆ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕಾರ್ಮಿಕರ ಸಮಸ್ಯೆಗಳ ಬಗ್ಗೆ ಈಗಾಗಲೆ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನಿರೀಕ್ಷಕರು ಭೇಟಿ ನೀಡುವ ಕನಿಷ್ಠ ಸೌಜನ್ಯ ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ವೇದಿಕೆ ಅಧ್ಯಕ್ಷ ಸುರೇಶ್, ಕುಣಿಗಲ್ ಕಚೇರಿಗೆ ಹಲವು ಬಾರಿ ಎಡತಾಕಿದರೂ ಕಾರ್ಮಿಕ ನಿರೀಕ್ಷಕರ ಪತ್ತೆ ಇಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿದರೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಎನ್ನುತ್ತಾರೆ. ಈ ಕಾರ್ಖಾನೆ ಸೇರಿದಂತೆ ಬಹಳಷ್ಟು ಕಾರ್ಖಾನೆಗಳಲ್ಲಿ ಅಪ್ರಾಪ್ತ ವಯಸ್ಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದರೂ ಕಾರ್ಮಿಕ ನಿರೀಕ್ಷಕರು ಈವರೆಗೂ ಚಕಾರ ಎತ್ತಿಲ್ಲ. ಕಾರ್ಖಾನೆಗಳಲ್ಲಿ ಕೇವಲ ಮಾಲೀಕರೊಂದಿಗೆ ಮಾತುಕತೆ ನಡೆಸುವುದಕ್ಕೆ ಕಾರ್ಮಿಕ ನಿರೀಕ್ಷಕರು ಕೆಲಸ ಸೀಮಿತಗೊಂಡಿದ್ದು, ಕಾರ್ಮಿಕರ ಕನಿಷ್ಠ ಸವಲತ್ತು ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ ಅವರು, ಇನ್ನಾದರೂ ಎಚ್ಚೆತ್ತು ಸದರಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸೂಕ್ತ ಸವಲತ್ತು ನೀಡುವಂತೆ ಆಗ್ರಹಿಸಿದ ಅವರು, ಇನ್ನೊಂದು ವಾರದಲ್ಲಿ ಸಂಬಂಧಪಟ್ಟ ಇಲಾಖಾದಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕ್ರಮ ಕೈಗೊಂಡಿಲ್ಲ: ವೇದಿಕೆ ಪದಾಧಿಕಾರಿಗಳು ಕಾರ್ಖಾನೆಯಲ್ಲಿ ಕಾರ್ಮಿಕರ ಸವಲತ್ತು ನೀಡದಿರುವ ಬಗ್ಗೆ ಭೇಟಿ ನೀಡಿರುವುದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ, ಕಾರ್ಖಾನೆ ವ್ಯವಸ್ಥಾಪಕ ಸೈಯದ್, ಕಾರ್ಖಾನೆಯಲ್ಲಿ ಕೆಲವೆ ಮಂದಿ ಕೆಲಸ ಮಾಡುತ್ತಿದ್ದು, ಕಾರ್ಮಿಕರೇ ಇಎಸೈ, ಪಿಎಫ್ ಹಿಡಿಯದಂತೆ ಮನವಿ ಮಾಡಿದ್ದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರಲ್ಲದೆ, ಕಾರ್ಮಿಕ ನಿರೀಕ್ಷಕರು ಕಳೆದ ಮೂರುವರೆ ವರ್ಷದಿಂದ ಕಾರ್ಖಾನೆಗೆ ಭೇಟಿ ನೀಡಿಲ್ಲವಾದ್ದರಿಂದ ಅವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದರು.