ಗ್ರಾಮ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶ್ರೀನಿವಾಸ್ ಸೂಚನೆ
ತುರುವೇಕೆರೆ: ಗ್ರಾಮ ಪಂಚಾಯ್ತಿ ವತಿಯಿಂದ ನಡೆಸಲಾದ ಗ್ರಾಮ ಸಭೆಗೆ ಉದ್ದೇಶಪೂರ್ವಕವಾಗಿ ಗೈರು ಹಾಜರಾಗುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿಯ ಅಭಿವೃಧ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸದಸ್ಯ ಶ್ರೀನಿವಾಸ್ ಸೂಚನೆ ನೀಡದ ಘಟನೆ ಸಮೀಪದ ಮಣಿಚೆಂಡೂರಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ನಡೆಯಿತು.
ಗ್ರಾಮ ಪಂಚಾಯ್ತಿ ಸಭೆಯನ್ನು ಉದ್ಘಾಟನೆ ಮಾಡಿದ ಜಿ.ಪಂ.ಸದಸ್ಯ ಶ್ರೀನಿವಾಸ್ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಪ್ರಶ್ನೆ ಕೇಳುವ ಸನ್ನಿವೇಶವಿದೆ. ಆದರೆ ಕೆಲವೇ ಸರ್ಕಾರಿ ನೌಕರರು ಸಭೆಗೆ ಹಾಜರಾಗಿದ್ದು. ಉಳಿದ ಅಧಿಕಾರಿಗಳು ಗೈರು ಹಾಜರಾಗಲು ಕಾರಣವೇನು ಎಂದು ಕಿಡಿಕಾರಿದರು. ಗ್ರಾಮಾಂತರ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ನೀಡುವ ದೃಷ್ಟಿಯಿಂದ ತಮ್ಮ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರಗಳಿಗೆ ವಾಟರ್ ಫಿಲ್ಟರ್‌ನ್ನು ಗ್ರಾಮ ಪಂಚಾಯ್ತಿ ವತಿಯಿಂದ ನೀಡಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿಗಂಗಯ್ಯ ಪ್ರಕಟಿಸಿದರು. ಸಾರ್ವಜನಿಕರು ಸರ್ಕಾರ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು ಹಾಗೂ ಸೂಕ್ತ ಮಾಹಿತಿಯನ್ನು ಸಹ ಪಡೆದುಕೊಳ್ಳಬೇಕು ಎಂದರು.