ಮಾಜಿ ಪ್ರಧಾನಿ ದೇವೇಗೌಡರನ್ನು ಸರ್ ಎಂವಿಗೆ ಹೋಲಿಸಿದ ಶಾಸಕ
ಕ.ಪ್ರ.ವಾರ್ತೆ , ಕುಣಿಗಲ್ , ಜು. 30
ಮಂಗಳವಾರ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಿ.ನಾಗರಾಜಯ್ಯ, ಮಾಜಿ ಪ್ರಧಾನಿ ದೇವೇಗೌಡರನ್ನು, ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಹೊಲಿಸಿದ ಘಟನೆ ನಡೆಯಿತು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕರು, ತುಮಕೂರು ಜಿಲ್ಲೆಯಲ್ಲಿ ತುಮಕೂರು ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿತ್ತು. ಹೇಮಾವತಿ ನಾಲಾ ಯೋಜನೆ ಪ್ರಾರಂಭಗೊಂಡಾಗ, ರಾಜ್ಯ ಸರ್ಕಾರದ ಮೇಲೆ ಸತತ ಒತ್ತಡ ಹೇರಿ ತುಮಕೂರು ಜಿಲ್ಲೆಯ ಹಲವು ತಾಲೂಕುಗಳಿಗೆ ಮತ್ತು ತುಮಕೂರಿಗೆ ಹೇಮಾವತಿ ನೀರು ಹರಿಸಲು ಮಾಜಿ ಪ್ರಧಾನಿ ದೇವೇಗೌಡರೇ ಪ್ರಮುಖ ಕಾರಣ ಎಂದರು.
ಹೇಗೆ ಮಂಡ್ಯ ಜಿಲ್ಲೆಯಾದ್ಯಂತ ಕಾವೇರಿ ನೀರು ಹರಿಸಲು ಸರ್ ಎಂ.ವಿ ಶ್ರಮಿಸಿದರೋ, ಹಾಗೆಯೆ ತುಮಕೂರು ಜಿಲ್ಲೆಯಾದ್ಯಂತ ಹೇಮಾವತಿ ನೀರು ಹರಿಯಲು ದೇವೇಗೌಡರು ಕಾರಣರಾಗಿದ್ದು, ಈಗಾಗಲೆ ಮಂಡ್ಯ ಜಿಲ್ಲೆಯ ಪ್ರತಿಯೊಬ್ಬರ ಮನೆಯಲ್ಲೂ ಸರ್ಎಂವಿ ಫೋಟೋ ಇಟ್ಟು ಗೌರವ ಸೂಚಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಹೇಮಾವತಿ ನೀರು ಹರಿಯುವ ಪ್ರತಿ ತಾಲೂಕಿನಲ್ಲೂ ದೇವೇಗೌಡರ ಫೋಟೋ ಇಟ್ಟು ಪೂಜೆ ಮಾಡಿದರೆ ತಪ್ಪಗಲಾರದು ಎಂದರು.
ಕ್ಷೇತ್ರಕ್ಕೆ ಬರದ ಕುಮಾರಸ್ವಾಮಿ: ಮಾಜಿ ಸಿಎಂ ಕುಮಾರಸ್ವಾಮಿ, ಬೆಂಗಳೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರೂ ಒಮ್ಮೆಯೂ ಕ್ಷೇತ್ರಕ್ಕೆ ಬಾರದ್ದನ್ನು ಶಾಸಕರು ಒಪ್ಪಿಕೊಂಡರು.
ಸಭೆಯಲ್ಲಿ ಮಾತನಾಡಿದ ಶಾಸಕ ಡಿ.ನಾಗರಾಜಯ್ಯ, ಕಳೆದ ಬಾರಿ ಬೆಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 58ಸಾವಿರ ಮತಗಳನ್ನು ನೀಡಿ, ಮಾಜಿ ಸಿಎಂ ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಲು ಕುಣಿಗಲ್ ಕ್ಷೇತ್ರದ ಜನತೆ ಶ್ರಮಿಸಿದ್ದರು. ಆಯ್ಕೆಯಾದ ನಂತರ ಒಮ್ಮೆಯೂ ಸಂಸದರಾಗಿ ಕ್ಷೇತ್ರಕ್ಕೆ ಬರಲಿಲ್ಲವೆಂದ ಅವರು, ಆದರೆ ಸಂಸದರ ನಿಧಿಯಿಂದ ಸಾಕಷ್ಟು ಅನುದಾನ ನೀಡಿದರು. ಆದರೆ ಬಹುತೇಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾದರೂ ಅವುಗಳ ಪ್ರಾರಂಭಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಅನುದಾನ ಸದ್ಬಳಕೆಯಾಗಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಭ್ಯರ್ಥಿ ಆಯ್ಕೆಯ ದಿಸೆಯಲ್ಲಿ ಕೆಲವೊಂದು ಗೊಂದಲ ಉಂಟಾಗಿ, ಸಹಜವಾಗಿ ಕಾರ್ಯಕರ್ತರಲ್ಲಿ ಅಸಮಾಧಾನವಿದ್ದು, ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲವಿಗೆ ಶ್ರಮಿಸಬೇಕೆಂದರು.
ದೇವೇಗೌಡರ ಕುಟುಂಬದ ಸದಸ್ಯರೊಬ್ಬರನ್ನು ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು. ಇದಕ್ಕೆ ಕಾರ್ಯಕರ್ತರು ಒಕ್ಕೂರಲಿನಿಂದ ಬೆಂಬಲಿಸಿದರು.