ಶವಸಂಸ್ಕಾರ ಜಾಗ ವಿವಾದ ಮುಂದೂಡಿಕೆ
ಕ.ಪ್ರ.ವಾರ್ತೆ , ತುಮಕೂರು , ಜು.30
ಸಿಡಿಯಜ್ಜನ ಪಾಳ್ಯದ ವಂಶಸ್ಥರು ಹಾಗೂ ಪಟ್ಟನಾಯನಕಹಳ್ಳಿ ಮಠದ ನಂಜಾವಧೂತ ಸ್ವಾಮಿಗಳ ನಡುವಿನ ಶವ ಸಂಸ್ಕಾರ ಜಾಗ ವಿವಾದ ಮುಂದಿನ ತಿಂಗಳ ಆ. 31 ಕ್ಕೆ ಮುಂದೂಡಲ್ಪಟ್ಟಿದೆ.
ವಿವಾದ ಇತ್ಯರ್ಥಪಡಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಎರಡೂ ಕಡೆಯವರ ಸಭೆ ಅಪೂರ್ಣಗೊಂಡಿತು. ಮೊದಲು ಸಿಡಿಯಜ್ಜನಪಾಳ್ಯದ ವಂಶಸ್ಥರ
ಪರ ವಕೀಲ ರವಿ ಸುಮಾರು ಒಂದುವರೆ ಗಂಟೆ ಕಾಲ ತಡವರಿಸದೆ ವಾದ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ನಂಜಾವಧೂತ ಸ್ವಾಮಿಗಳು ಹಾಗೂ ಪಟ್ಟನಾಯಕನಹಳ್ಳಿ ಮಠದ ಪರ ವಾದ ಮಂಡಿಸಿದ ವಕೀಲ ಲಕ್ಷ್ಮೀಕಾಂತ್, ಮಠದ ವಶದಲ್ಲಿದೆ ಎಂದು ಹೇಳಲಾಗಿರುವ 232 ಎಕರೆ 29 ಗುಂಟೆ ಜಮೀನು ಮಠಕ್ಕೆ ಹೇಗೆ ಬಂತು ಎಂಬುದನ್ನು ಹೇಳುವಲ್ಲಿ ತಡವರಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಮೀನು ಬಂದ ಬಗೆ ಹೇಗೆ ಎಂಬುದು ಗೊತ್ತಾಗದೆ, ಪರಿಪೂರ್ಣ ದಾಖಲಾತಿ ಇಲ್ಲದೆ ಏನೂ ಮಾಡಲಾಗದು. ನಾನು ಸಾರ್ವಭೌಮನಲ್ಲ. ಮೇಲಧಿಕಾರಿಗಳಿಗೆ ಉತ್ತರ ಹೇಳಬೇಕಾದ ಜವಾಬ್ದಾರಿ ನನ್ನ ಮೇಲಿದೆ. ದಾಖಲಾತಿ ಇಲ್ಲದೆ ಕ್ರಮ ಜರುಗಿಸಲು ಹೇಗೆ ಸಾಧ್ಯ. ಸರ್ಕಾರಕ್ಕೆ ಏನು ಉತ್ತರ ಹೇಳುವುದು. ದಾಖಲಾತಿ ನೀಡದೇ ತೀರ್ಮಾನ ಹೇಳಲಾದೀತೆ ನೀವೇ ಹೇಳಿ ಎಂದು ಪ್ರಶ್ನಿಸಿದರು.
ಜತೆಗೆ ಎರಡೂ ಕಡೆಯವರು ಲಿಖಿತ ವಾದವನ್ನು ಬೇಕಾದರೆ ಮಂಡಿಸಿ, ಸರ್ಕಾರಕ್ಕೆ ರವಾನೆ ಮಾಡಲು ಸಿದ್ಧನಿದ್ದೇನೆ ಎಂದು ಜಿಲ್ಲಾಧಿಕಾರಿಗಳು ಆಯ್ಕೆಯನ್ನು ಮಠದ ವಕೀಲರಿಗೆ ಬಿಟ್ಟರು.
ಜಮೀನಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಲಾಗಿದೆ. ಆದರೆ ಇನ್ನೂ ದೊರಕಿಲ್ಲ. ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕು ಎಂದು ವಕೀಲ ಲಕ್ಷ್ಮೀಕಾಂತ್ ಕೋರಿದರು. ಇದಕ್ಕೆ ವಿರೋಧಿ ಗುಂಪು ವಿರೋಧ ವ್ಯಕ್ತಪಡಿಸಿತು. ಕೊನೆಗೆ ಜಿಲ್ಲಾಧಿಕಾರಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ, ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ಮುಂದಿನ ತಿಂಗಳ 31 ರಂದು ವಾದಕ್ಕೆ ದಿನಾಂಕ ನಿಗದಿಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಹಾಗೂ ಎರಡೂ ಕಡೆಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. ಸುಮಾರು 4 ವರೆಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಯಿತು.
ನಂಜಾವಧೂತರು ಸ್ವಾಮಿಗಳಲ್ಲ
ತುಮಕೂರು: ಹಾಲಿ ಪಟ್ಟನಾಯನಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಮಠಾಧೀಶರೆಂದು ಹೇಳಲಾಗುತ್ತಿರುವ ನಂಜಾವಧೂತ ಸ್ವಾಮಿಗಳು ಮಠಾಧೀಶರಲ್ಲ ಎಂದು ಹೈಕೋರ್ಟ್ ಹಾಗೂ ಸಿವಿಲ್ ನ್ಯಾಯಾಲಗಳಲ್ಲಿ ತೀರ್ಪು ಬಂದಿದೆ. ಈ ತೀರ್ಪನ್ನು ನಂಜಾವಧೂತರು ಮತ್ತೆ ಮರುಪ್ರಶ್ನಿಸಿಲ್ಲ. ಹೀಗಾಗಿ ನಂಜಾವಧೂತರು ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಮಠಾಧೀಶರಲ್ಲ. ಜತೆಗೆ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ದೇವಾಲಯವೇ ಹೊರತು ಮಠವಲ್ಲ ಎಂದು ವಕೀಲ ರವಿ ವಾದ ಮಂಡಿಸಿದರು.