ಸಿಂಗದಹಳ್ಳಿ ದಳವಾಯಿಕೆರೆಗೆ ಹೇಮಾವತಿ ನೀರು: ಸಿಎಂಗೆ ಮನವಿ
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅತಿ ಹಿಂದುಳಿದ ಪ್ರದೇಶವಾದ ಕಂದಿಕೆರೆ ಹೋಬಳಿಯ ಗುಡ್ಡದಾಚೆ ಭಾಗದ ಹಳ್ಳಿಗಳ ಕುಡಿಯುವ ನೀರಿನ ಬವಣೆ ನೀಗಿಸಲು ಹೇಮಾವತಿ ನಾಲೆಯಿಂದ ನೀರು ಹರಿಸುವಂತೆ ಸಿಂಗದಹಳ್ಳಿ ರಾಜ್‌ಕುಮಾರ್ ಮುಖಂಡತ್ವದಲ್ಲಿ ತಹಸೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈಗಾಗಲೇ ಗುಬ್ಬಿ ತಾಲೂಕಿನ ಅದಲಗೆರೆ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು, ಅಲ್ಲಿಂದ ಸಿಂಗದಹಳ್ಳಿ ದಳವಾಯಿ ಕೆರೆಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು ಸಾಧ್ಯತೆಯಿದೆ. ಈ ಭಾಗದ ತೀರ್ಥಪುರ, ರಾಮನಹಳ್ಳಿ , ತಿಮ್ಮನಹಳ್ಳಿ ಪಂಚಾಯ್ತಿಯ ಸಿಂಗದಹಳ್ಳಿ, ಬರಶಿಡ್ಲಹಳ್ಳಿ, ಚಿಕ್ಕರಾಂಪುರ,ದೊಡ್ಡರಾಂಪುರ, ಯರೇಕಟ್ಟೆ, ಕಾತ್ರಿಕೆಹಾಲ್, ಹನುಮಂತನಹಳ್ಳಿ, ಅಶ್ರೀಹಾಳ್, ಜಾಣೇಹಾರ್, ಅಜ್ಜಿಗುಡ್ಡೆ, ಕೆಂಪರಾಯನಹಟ್ಟಿ, ಬೆಳವಾಡಿ, ಸಿದ್ದನಕಟ್ಟೆ, ಬಡಕೇಗುಡ್ಲು, ಮೈಲುಕಬ್ಬೆ, ಘಂಟೇನಹಳ್ಳಿ ಇನ್ನು ಮುಂತಾದ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಬಹಳ ಕುಸಿದಿದೆ. ಆದಕಾರಣ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಕೊಳವೆ ಬಾವಿಗಳು ಸಾವಿರ ಅಡಿ ಆಳ ಕಂಡಿವೆ. ಆದ್ದರಿಂದ ಫ್ಲೋರೈಡ್ ಅಂಶ ಜಾಸ್ತಿಯಾಗಿ ಜನತೆ ಕಾಯಿಲೆಗಳಿಂದ ನರಳುವಂತಾಗಿದೆ. ಗುಬ್ಬಿ ತಾಲೂಕಿನ ಅದಲಗೆರೆ ಕೆರೆಯಿಂದ ಭೋಗಸಂದ್ರ ಕೆರೆಯ ಮೂಲಕ ಸಿಂಗದಹಳ್ಳಿಗೆ ನೈಸರ್ಗಿಕವಾಗಿ ನೀರು ಹರಿಯುವ ಅವಕಾಶವಿದ್ದು, ಇದಕ್ಕಾಗಿ ಯಾವುದೇ ವೆಚ್ಚ ಸರ್ಕಾರಕ್ಕೆ ತಗಲುವುದಿಲ್ಲ. ಇಂತಹ ಜನಹಿತ ಯೋಜನೆಗೆ ಮಂಜೂರಾತಿ ನೀಡಿ ಈ ಭಾಗದ ಜನರ ಬದುಕನ್ನು ಉಳಿಸಿಕೊಡಬೇಕೆಂದು ಸಿಂಗದಹಳ್ಳಿ ರಾಜ್‌ಕುಮಾರ್ ಮುಖ್ಯಮಂತ್ರಿಯವರನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಕ್ಯಾತನಾಯಕನಹಳ್ಳಿ ರಂಗಸ್ವಾಮಿ ಮುಂತಾದವರಿದ್ದರು.