ಸ್ವಾತಂತ್ರ್ಯ ಚಳವಳಿಗೆ ಗ್ರಾಮೀಣರ ಕೊಡುಗೆ ಅಪಾರ
ಕನ್ನಡಪ್ರಭ ವಾರ್ತೆ , ತುಮಕೂರು , ಜು.30
ದೇಶದ ಸ್ವಾತಂತ್ರ್ಯ ಚಳವಳಿಗೆ ಗ್ರಾಮೀಣರ ಕೊಡುಗೆ ಅಪಾರ ಎಂದು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಕನ್ನಡ ಅಧ್ಯಾಪಕ ಡಾ. ಬಿ. ಪ್ರಹ್ಲಾದ್ ರೆಡ್ಡಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ವಿದ್ಯೋದಯ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವರಾಜ ಕಟ್ಟೀಮನಿಯವರ ಬದುಕು-ಬರಹ ವಿಚಾರ ಸಂಕಿರಣದಲ್ಲಿ ಬಸವರಾಜು ಕಟ್ಟೀಮನಿಯವರ ಕಾದಂಬರಿಗಳನ್ನು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಮಾಡಿ ಮಡಿದವರು ಕಾದಂಬರಿಯ ಪಾತ್ರಗಳು ಕೇವಲ ಕಾಲ್ಪನಿಕ ಪಾತ್ರಗಳಲ್ಲ, ಚರಿತ್ರೆಯಲ್ಲಿ ದಾಖಲಾಗದಿರುವ ಪಾತ್ರಗಳವು. ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾಗಿತ್ತು. ಈ ಚಳವಳಿಯಲ್ಲಿ ದಾಖಲಾಗದ ಅನೇಕ ವಿಷಯಗಳನ್ನು ಕಾದಂಬರಿ ಅನಾವರಣಗೊಳಿಸುತ್ತದೆ. ಇಂದಿನ ನಮ್ಮ ಯುವ ಜನಾಂಗದಲ್ಲಿ ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸುವ ಕಾರ್ಯವನ್ನು ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.
ಬಸವರಾಜ ಕಟ್ಟೀಮನಿಯವರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದ ತುಮಕೂರು ವಿ.ವಿ. ಕನ್ನಡ ಅಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಪ್ರಗತಿಶೀಲ ಚಳುವಳಿಗೆ ಖಚಿತ ಮತ್ತು ಸ್ಪಷ್ಟರೂಪ ನೀಡಿದವರಲ್ಲಿ ಕಟ್ಟೀಮನಿ ಪ್ರಮುಖರು. ಅವರೆಂದೂ ಯಾವುದೇ ಚಳವಳಿ ಅಥವಾ ವಿಚಾರಗಳನ್ನು ಕುರುಡು ಶ್ರದ್ಧೆಯಿಂದ ಕಂಡವರಲ್ಲ. ಪ್ರಗತಿಶೀಲ ಚಳವಳಿ ಕೇವಲ ಡಾಂಭಿಕ ಆಗುತ್ತಿದೆ ಎನಿಸಿದಾಗ ಅದರಿಂದ ಸಿಡಿದು ಬಂದವರು. ಅವರಿಗೆ ಪ್ರಗತಿಶೀಲತೆ ಕೇವಲ ಘೋಷಣೆಯಾಗಿರಲಿಲ್ಲ. ಬದಲಿಗೆ ಬದುಕನ್ನು ಪ್ರಾಮಾಣಿಕವಾಗಿ ನೋಡುವ, ಸಮಾಜವನ್ನು ಸೈದ್ಧಾಂತಿಕ ನಿಲುವುಗಳಲ್ಲಿ ವಿಶ್ಲೇಷಿಸುವ ಬದ್ಧತೆಯಿತ್ತು ಎಂದು ಅಭಿಪ್ರಾಯ ಪಟ್ಟರು.
ಮೌಢ್ಯತೆ ವಿರೋಧ: ಕಾರ್ಯಕ್ರಮ ಉದ್ಘಾಟಿಸಿದ ವಿದ್ಯೋದಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ. ಚಂದ್ರಣ್ಣ ಬಸವರಾಜ ಕಟ್ಟೀಮನಿಯವ ಸಾಹಿತ್ಯ ತತ್ಕಾಲಿನ ಸಮಾಜದಲ್ಲಿರುವ ಮೌಢ್ಯತೆಗಳನ್ನು ವಿರೋಧಿಸುತ್ತಲೇ ನವ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದೆ ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸೋ.ಮು. ಭಾಸ್ಕಾರಾಚಾರ್ ಬಸವರಾಜ ಕಟ್ಟೀಮನಿಯವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ರಾಜಕೀಯ ಚಿಂತಕರಾಗಿ ಗಮನಸೆಳೆಯುತ್ತಾರೆ. ಅವರ ಆದರ್ಶ ಬದುಕು ಹಾಗೂ ಸಾಹಿತ್ಯಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಶಿಲ್ಪ ಜಿ. ವಿ. ಮತ್ತು ಲಕ್ಷ್ಮೀ ಜಿ. ವಿ. ಪ್ರಾರ್ಥಿಸಿದರು. ಹನುಮಂತಪ್ಪ ಸ್ವಾಗತಿಸಿದರೆ, ಹೊನ್ನೇಶ್ ಟಿ.ಎನ್. ವಂದಿಸಿದರು. ವಿನಯ್ ಆರ್. ಮತ್ತು ಸತ್ಯಶ್ರೀ ನಿರೂಪಿಸಿದರು.