ಸ್ವಾತಂತ್ರ್ಯ ದಿನಾಚರಣೆ: ಲೋಪ, ದೋಷ ಬೇಡ
ತುಮಕೂರು: ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಲೋಪದೋಷಗಳಾಗದಂತೆ ಎಲ್ಲಾ ಶಾಲಾ, ಕಾಲೇಜು, ಕಚೇರಿಗಳ ಧ್ವಜಾರೋಹಣ ಉಸ್ತುವಾರಿ ಹೊತ್ತಿರುವಂತಹ ಸಿಬ್ಬಂದಿ, ನೌಕರರಿಗೆ ತಾಲೂಕುಗಳಲ್ಲಿ ತರಬೇತಿ ಏರ್ಪಾಡು ಮಾಡುವಂತೆ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ ಕಂಡು ಬಂದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗೆ ಯಾವುದೇ ಕಾರಣಕ್ಕೂ ಕ್ಷಮೆ ಇಲ್ಲ ಎಂದು ಅವರು ಈ ಸಂದರ್ಭ ತಿಳಿಸಿದರು. ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡತಕ್ಕಂತಹ ಸ್ತಂಭಗಳು ಎಷ್ಟು, ಮಳೆಯಿಂದಾಗಿ ತುಕ್ಕು ಹಿಡಿದಿರುವ ಧ್ವಜಸ್ತಂಭಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ, ಧ್ವಜಸ್ತಂಭಗಳ ದುರಸ್ತಿಯೆಡೆ ಗಮನ ಹರಿಸುವಂತೆ ಅವರು ತಿಳಿಸಿದರು.
ಶ್ರಮದಾನ ಏರ್ಪಡಿಸಿ: ರಾಷ್ಟ್ರಧ್ವಜದ ಚರಿತ್ರೆ, ರಾಷ್ಟ್ರಧ್ವಜ ಹಾರಿಸಬೇಕಾದ ಸಮಯ, ಸಂದರ್ಭ ಮುಂತಾದ ವಿಷಯಗಳನ್ನು ಪ್ರಾಥಮಿಕವಾಗಿ ನಾವೆಲ್ಲರೂ ಅರಿಯಬೇಕಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು 67ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಜಿಲ್ಲೆಯಲ್ಲಿ ಶ್ರಮದಾನ, ರಕ್ತದಾನ ಏರ್ಪಾಡು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೋತ್ಥಾನ ಪರಿಷತ್‌ನಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಕ್ಯಾಸೆಟ್‌ಗಳು ಮತ್ತು ಸಿ.ಡಿ.ಗಳನ್ನು, ಪುಸ್ತಕಗಳನ್ನು ಖರೀದಿಸಿ ಆಗಸ್ಟ್ 15 ರಂದು ಮಳಿಗೆ ತೆರೆದು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಭಾರತ ಸೇವಾದಳ, ಖಾದಿ ಭಂಡಾರ, ಎನ್.ಸಿ.ಸಿ., ಎನ್.ಎಸ್.ಎಸ್. ಸಂಸ್ಥೆಗಳನ್ನು ಸಕ್ರಿಯವಾಗಿ ಅಂದು ಪಾಲ್ಗೊಳ್ಳುವಂತೆ ಕ್ರಮಕೈಗೊಳ್ಳಬೇಕು ಮತ್ತು ನಗರಸಭೆ ವತಿಯಿಂದ ಉತ್ತಮ ಪೌರ ಕಾರ್ಮಿಕರಿಗೆ ಸನ್ಮಾನ ಹಮ್ಮಿಕೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು.
ಪ್ರತಿಭಾವಂತ ಮಕ್ಕಳಿಗೆ ಈ ಸಂದರ್ಭ ಸನ್ಮಾನ ಮಾಡಬೇಕು ಮುಂತಾದ ಸಲಹೆಗಳನ್ನು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ತಹಸೀಲ್ದಾರ್ ಮಾರುತಿ ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.