ಒಂಟಿ ಸಲಗ ಸೆರೆ ಹಿಡಿಯಲು ಬೆಳ್ಳಾರಕ್ಕೆ ಬಂದ ಸಾಕು ಆನೆಗಳು
ಹುಳಿಯಾರು: ಹಿರಿಯೂರು ತಾಲೂಕಿನ ಮಾದೇನಹಳ್ಳಿ ಸಮೀಪ ಮಂಗಳವಾರ ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದ ಅಂಗವಿಕಲ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿ ಕಣ್ಮರೆಯಾಗಿದ್ದ ಒಂಟಿ ಸಲಗ ಇದೀಗ ಹುಳಿಯಾರು ಸಮೀಪದ ಘಟೇನಹಳ್ಳಿ, ಬೆಳ್ಳಾರ ಆರಣ್ಯ ಪ್ರದೇಶದಲ್ಲಿ ಕಂಡು ಬಂದಿದೆ.
ಹೆಜ್ಜೆ ಗುರುತಿನ ಜಾಡುಹಿಡಿದು ಕಳೆದ ಮೂರು ದಿನಗಳಿಂದ ಆನೆಯ ಪತ್ತೆ ಕಾರ್ಯದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಯವರು ಶ್ರಮಿಸುತ್ತಿದ್ದಾರೆ. ಅಲ್ಲದೆ ಹಲವು ರಂಪಾಟಗಳನ್ನು ಮಾಡಿ ತಿರುಗಾಡುತ್ತಿರುವ ಕಾಡಾನೆಯನ್ನು ಹಿಡಿಯಲು ಹೆಗ್ಗಡದೇವನಕೋಟೆ, ಮೈಸೂರು ಹಾಗೂ ದುಬಾರೆಯಿಂದ ಇಲಾಖೆಯ ಸಾಕು ಆನೆಗಳನ್ನು ತರಿಸಿದ್ದು ಅವು ಬೆಳ್ಳಾರದ ಪರಿವೀಕ್ಷಣಾ ಮಂದಿರದ ಅವರಣದಲ್ಲಿ ಬೀಡು ಬಿಟ್ಟಿವೆ.
ಪುಂಡಾನೆಯನ್ನು ಸೆರೆ ಹಿಡಿದು, ಸುರಕ್ಷಿತವಾಗಿ ಅರಣ್ಯಕ್ಕೆ ಸಾಗಿಸಲು ಆಗಮಿಸಿರುವ ಸಾಕು ಆನೆಗಳಾದ ಅರ್ಜುನ,ಶ್ರೀರಾಮ, ಗಜೇಂದ್ರ, ಹರ್ಷ ಕಾರ್ಯಾಚರಣೆ ನಡೆಸುತ್ತಿವೆ. ಆನೆಗಳ ಆರೈಕೆಗಾಗಿ ಹುಲ್ಲು, ಹಸಿ ಮೇವು, ಬತ್ತ ಸೇರಿದಂತೆ ಇತರ ಪದಾರ್ಥಗಳನ್ನು ನೀಡುತ್ತಿರುವುದಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಒಂಟಿ ಸಲಗದ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಎಸಿಎಫ್ ನಾಗೇಂದ್ರ ರಾವ್, ಆರ್ಎಫ್ಓಗಳಾದ ಶಾಂತರಾಜಯ್ಯ, ಮಾರುತಿ, ಗೋವಿಂದಪ್ಪ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.