ಕನಸಾಗಿಯೇ ಉಳಿಯಲಿದೆಯೇ ವಿಜ್ಞಾನ ಗುಡ್ಡ ಯೋಜನೆ?
ಕ.ಪ್ರ.ವಾರ್ತೆ , ತುಮಕೂರು , ಜು. 31
ತುಮಕೂರು ಜಿಲ್ಲೆಯ ಮಹತ್ವಾಕಾಂಕ್ಷಿ ಪ್ರಸ್ತಾಪಿತ ವಿಜ್ಞಾನ ಗುಡ್ಡ ಪರಿಕಲ್ಪನೆ, ಯೋಜನೆ ಕೇವಲ ಕನಸಾಗಿಯೇ ಉಳಿಯುವ ಲಕ್ಷಣಗಳು ದಟ್ಟವಾಗುತ್ತಿವೆ.
ಯೋಜನೆ ಜಾರಿಯಾಗುವ ಸುಮಾರು 1000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಸುಮಾರು 327 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಈವರೆಗೆ ಒತ್ತುವರಿ ತೆರವುಗೊಳಿಸುವ ಯಾವುದೇ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿಲ್ಲ.
ಜನಪ್ರತಿನಿಧಿಗಳು ಈ ಕುರಿತು ಸೊಲ್ಲೆತ್ತಿಲ್ಲ. ಯೋಜನೆಗೆ ಶ್ರದ್ಧೆ ವಹಿಸಿ ಓಡಾಡುತ್ತಿದ್ದ ಸಂಸದ ಜಿ.ಎಸ್. ಬಸವರಾಜು ಸಹ ಒತ್ತುವರಿ ತೆರವು ಕುರಿತಂತೆ ಈ ವರೆಗೆ ಸದ್ದು ಮಾಡದೇ ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒತ್ತುವರಿ ತೆರವುಗೊಳಿಸುವಂತೆ ನಾಮಕಾವಸ್ತೆಗೆಂಬಂತೆ 3-8-2012 ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆದು ಕೈ ತೊಳೆದುಕೊಂಡಿದ್ದಾರೆ.
ನಂತರ ಈ ಕುರಿತಂತೆ ಬಸವರಾಜ್ ಸೊಲ್ಲೆತ್ತಿಲ್ಲ. ಈ ಮಧ್ಯೆ ವಿಜ್ಞಾನಗುಡ್ಡ, ಯೋಜನೆಗೆ ಚಾಲನೆ ನೀಡಲು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸೇರಿದಂತೆ ಆಸಕ್ತರು ಪಕ್ಷಾತೀತವಾಗಿ ಪ್ರಯತ್ನ ಮುಂದುವರೆಸಿದ್ದಾರೆ. ಯೋಜನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ಬೆಂಬಲ ನೀಡುವ ಮಾತನ್ನಾಡಿದ್ದಾರೆ. ಆದರೆ ಒತ್ತುವರಿ ತೆರವು ಕುರಿತಂತೆ ಯಾವೊಂದು ಪ್ರಮುಖ ಪಕ್ಷವೂ ಸೊಲ್ಲೆತ್ತಿಲ್ಲ. ತೋರಿಕೆಗೆ ಬೆಂಬಲ ವ್ಯಕ್ತಪಡಿಸಿ ಸುಮ್ಮನಾಗಿವೆ. ವಿಜ್ಞಾನ ಕೇಂದ್ರ, ಪರಿಸರ ಸಂರಕ್ಷಣೆಗಾಗಿ ಹಪಹಪಿಸುವ ಜಿಲ್ಲೆಯ ಪರಿಸರವಾದಿಗಳು, ಪ್ರಗತಿಪರರು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೊಲ್ಲೆತ್ತದೆ ಜಾಣ ಮೌನ, ಕುರುಡು, ಕಿವುಡು ಪ್ರದರ್ಶಿಸುತ್ತಿರುವುದು ಹತ್ತು-ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ಸರ್ಕಾರಿ ಭೂಮಿ ಒತ್ತುವರಿ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಅಷ್ಟೇ ಅಲ್ಲ, ತುಮಕೂರಿನಲ್ಲಿ ಉಪ ಲೋಕಾಯುಕ್ತರು ತುಮಕೂರು ನಗರಸಭೆ ಆಯುಕ್ತ ನಾರಾಯಣಪ್ಪ ವಿರುದ್ಧ ಒತ್ತುವರಿ ತೆರವುಗೊಳಿಸದೇ ಇದ್ದುದಕ್ಕೆ ಹರಿ ಹಾಯ್ದಿದ್ದಾರೆ. ಒತ್ತುವರಿ ತೆರವುಗೊಳಿಸದೇ ವಿಜ್ಞಾನಗುಡ್ಡ ಯೋಜನೆಗೆ ಚಾಲನೆ ನೀಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸ್ವಯಂ ಉದ್ಯೋಗಿಗಳ ಆಕೃತಿ ಸೃಷ್ಟಿ ವಿವಿ: ರಾಷ್ಟ್ರೀಯ ಹೂಡಿಕೆ ಹಾಗೂ ಉತ್ಪಾದನಾ ವಲಯ ( ನಿಮ್ಜ್) ಯೋಜನೆಯಡಿ ಹಾಗೂ ಉದ್ದೇಶಿತ ವಿಜ್ಞಾನ ಗುಡ್ಡದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಯೋಜನೆಗಳ ಫಲವಾಗಿ ತುಮಕೂರು ಜಿಲ್ಲೆಯಲ್ಲಿ ಒಂದು ಸ್ವಯಂ ಉದ್ಯೋಗಿಗಳ ಆಕೃತಿ ಸೃಷ್ಟಿ ವಿಶ್ವ ವಿದ್ಯಾಲಯ ಸ್ಥಾಪನೆಯಾಗಲು ಪೂರಕವಾಗಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಮೂಲಕ ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ, ಮಾರುಕಟ್ಟೆ, ಪ್ರವಾಸ, ಸಹಾಯಧನ ಇತ್ಯಾದಿ ಯೋಜನೆಗಳಿಗಾಗಿ ವಾರ್ಷಿಕ ಸಾವಿರಾರು ಕೋಟಿ ಹಣ ಖರ್ಚು ಮಾಡಲಿದೆ. ಎಲ್ಲ ಇಲಾಖೆಗಳ ಯೋಜನೆಗಳನ್ನು ಒಂದೇ ಆವರಣದಲ್ಲಿ ಜಾರಿಗೊಳಿಸುವ ಮೂಲಕ ಎಲ್ಲ ಸ್ವಯಂ ಉದ್ಯೋಗಿಗಳಿಗೆ ಸರ್ಕಾರವು ಯಾವ -ಯಾವ ಇಲಾಖೆಯಲ್ಲಿ ಯಾವ - ಯಾವ ಯೋಜನೆಗೊಳಿಸಿದೆ ಎಂಬ ಬಗ್ಗೆ ಅರಿವು ಮೂಡಿಸುವಲ್ಲದೆ, ಪ್ರಾಯೋಗಿಕವಾಗಿ ಪ್ರತಿಯೊಂದು ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆ ಬಗ್ಗೆ ಸೂಕ್ತ ಅನುಭವ ಪಡೆಯಲು ಅತ್ಯುತ್ತಮ ವೇದಿಕೆಯಾಗಲಿದೆ. ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿನ ಪ್ರತಿಯೊಂದು ಯೋಜನೆಯ ಆವಿಷ್ಕಾರ, ಅನ್ವೇಷಣೆ, ಸಂಶೋಧನೆ, ವಿವಿಧ ಮಾದರಿ ಯಂತ್ರೋಪಕರಣಗಳು, ವಿವಿಧ ಉತ್ಪನ್ನಗಳು ಹೀಗೆ ಪ್ರತಿಯೊಂದರ ವಿವರವು ಇಲ್ಲಿ ದೊರೆಯಲಿದೆ.
ಜಿಲ್ಲೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಸಂಪತ್ತನ್ನು ಗಳಿಸಿಕೊಂಡು ರಾಷ್ಟ್ರದಲ್ಲಿಯೇ ಸ್ಪರ್ಧಾತ್ಮಕವಾಗಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಸೃಷ್ಟಿಸುವ ಆವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ಸರ್ಕಾರಿ ಜಮೀನು ಒತ್ತುವರಿಯದ್ದೇ ಪ್ರಮುಖ ಸಮಸ್ಯೆಯಾಗಿದೆ. ಒತ್ತುವರಿ ತೆರವುಗೊಳಿಸದೆ ಯೋಜನೆ ಜಾರಿ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.
-ಅದಲಗೆರೆ ನಾಗೇಂದ್ರಕುಮಾರ್