ನಿರ್ಲಕ್ಷ್ಯಕ್ಕೆ ಸಸ್ಪೆಂಡ್ ಆದ ಗ್ರಾ.ಪಂ. ಕಾರ್ಯದರ್ಶಿ
ತಿಪಟೂರು: ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯತನ ತೋರಿದ್ದ ಕಾರಣ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳವರ ಆದೇಶದ ಮೇರೆಗೆ ತಾ.ಪಂ. ಇ.ಓ. ಕೃಷ್ಣಾರೆಡ್ಡಿಯವರು ಬುಧವಾರ ಅಮಾನತು ಪಡಿಸಿ ಆದೇಶ ಹೊರಡಿಸಿರುವ ಘಟನೆ ನಡೆದಿದೆ.
ಗ್ರಾ.ಪಂ.ವ್ಯಾಪ್ತಿಯ ಗುಡಿಗೊಂಡನಹಳ್ಳಿ ಭೋವಿ ಕಾಲೋನಿ ಮತ್ತು ಗೊಲ್ಲರಹಟ್ಟಿಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಒಂದು ಚರಂಡಿಯೊಳಗಡೆ ಹಾಯ್ದುಹೋಗಿದ್ದು, ಆ ಜಾಗದಲ್ಲಿ ಪೈಪ್ ಕಳೆದ 15 ದಿನಗಳ ಹಿಂದೆ ಒಡೆದು ಹೋಗಿತ್ತು. ಇದರಿಂದ ಚರಂಡಿಯ ಕಲುಷಿತ ನೀರು ಕುಡಿಯುವ ನೀರಿನ ಪೈಪ್ ಒಳಗಡೆ ಸೇರುತ್ತಿದೆ. ರಿಪೇರಿ ಮಾಡಿಸಿಕೊಡಿ ಎಂದು ಗ್ರಾಮಸ್ಥರು ಕಾರ್ಯದರ್ಶಿಗೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಈ ದೂರನ್ನು ಕಾರ್ಯದರ್ಶಿ ಉಮೇಶ್ ಉಡಾಫೆ ಮತ್ತು ನಿರ್ಲಕ್ಷಿಸುತ್ತಿದ್ದ ಪರಿಣಾಮ ಮಂಗಳವಾರ ಸುಮಾರು 20ಕ್ಕೂ ಹೆಚ್ಚು ಜನರಿಗೆ ದಿಢೀರ್ ವಾಂತಿ ಭೇದಿ ಪ್ರಾರಂಭವಾದ ಪರಿಣಾಮ ಸಾರ್ವಜನಿಕರ ಆಸ್ಪತ್ರೆಗೆ ದಾಖಲಾಗಿದ್ದರು. ವಾಂತಿ ಭೇದಿ ಪ್ರಾರಂಭವಾದಾಗಲೂ ಕಾರ್ಯದರ್ಶಿಯವರಿಗೆ ಗ್ರಾಮಸ್ಥರು
ಫೋನ್ ಮೂಲಕ ಪರಿಸ್ಥಿತಿಯನ್ನು ವಿವರಿಸಿದರೆ ಕಾರ್ಯದರ್ಶಿ ಉಡಾಫೆಯಿಂದ ಯಾರೇನೂ ಸತ್ತಿಲ್ಲವಲ್ಲ ಎಂದು ಹಗುರವಾಗಿ ವರ್ತಿಸಿದ್ದರು.
ಈ ಬಗ್ಗೆ ಮನನೊಂದ ಗ್ರಾಮಸ್ಥರು ಆಕ್ರೋಶದಿಂದ ನಗರದ ಸಾರ್ವಜನಿಕರ ಆಸ್ಪತ್ರೆಯ ಮುಂದೆ ಬೇಜಾವ್ದಾರಿಯಿಂದ ವರ್ತಿಸುತ್ತಿರುವ ಕಾರ್ಯದರ್ಶಿಯನ್ನು ಕೂಡಲೆ ಅಮಾನತು ಪಡಿಸದಿದ್ದರೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತೆ ಎಂದು ಪ್ರತಿಭಟನೆಗಿಳಿದ ಪರಿಣಾಮ ಕಾರ್ಯದರ್ಶಿ ಕರ್ತವ್ಯ ಲೋಪ ದೃಢಪಡಿಸಿಕೊಂಡ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯದರ್ಶಿಯವರು ಅಮಾನತಿಗೆ ಆದೇಶ ಹೊರಡಿಸಿದ್ದಾರೆಂದು ಇ.ಓ. ತಿಳಿಸಿದ್ದಾರೆ.