ಎತ್ತಿನಹೊಳೆಗೆ ಜೋತುಬಿದ್ದ ಜಿಲ್ಲಾ ಕಾಂಗ್ರೆಸ್
ತುಮಕೂರು: ಪರಮಶಿವಯ್ಯ ವರದಿ ಜಾರಿ ಕುರಿತು ಮೊದಲಿನಿಂದಲೂ ನಿರಾಸಕ್ತಿ ತೋರುತ್ತಲೇ ಬಂದಿರುವ ತುಮಕೂರು ಜಿಲ್ಲಾ ಕಾಂಗ್ರೆಸ್ ಮತ್ತೊಮ್ಮೆ ಪರಮಶಿವಯ್ಯ ಜಾರಿ ಪರ ಇಲ್ಲ ಎಂಬುದನ್ನು ಮತ್ತೆ ತೋರಿಸಿದೆ. ಆದರೆ ಇದಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪರಮಶಿವಯ್ಯ ವರದಿ ಸಮರ್ಥಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಆಧಾರ್ ಆಧಾರಿತ ಎಲ್ಪಿಜಿ ಸಬ್ಸಿಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ಉಪಸ್ಥಿತರಿದ್ದ ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ ತುಮಕೂರು ಜಿಲ್ಲೆಯ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಆದರೆ ಅಪ್ಪಿ-ತಪ್ಪಿಯೂ ಕೂಡ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಪರಮಶಿವಯ್ಯ ವರದಿ, ಹೇಮಾವತಿ ಪ್ಲಡ್ ಕೆನಾಲ್ ಯೋಜನೆಗಳನ್ನೊಳಗೊಂಡ ವಾಟರ್ಗ್ರಿಡ್ ಯೋಜನೆ ಕುರಿತಂತೆ ಚಕಾರವೆತ್ತಿಲ್ಲ. 3 ರಿಂದ 4 ಜಿಲ್ಲೆಗಳಿಗೆ ನೀರೊದಗಿಸುವ ಎತ್ತಿನಹೊಳೆ ಯೋಜನೆಗಷ್ಟೆ ತಮ್ಮ ಆದ್ಯತೆ ಎಂದು ಕಾಂಗ್ರೆಸ್ ಈ ಮೂಲಕ ತೋರ್ಪಡಿಸಿಕೊಂಡಿದೆ.
ಸಿದ್ದು ಉತ್ಸುಕ: ತುಮಕೂರು ಜಿಲ್ಲೆಯ ಬರಗಾಲ, ಕುಡಿಯುವ ನೀರಿನ ಸಮಸ್ಯೆ, ವರ್ಷದಲ್ಲಿ ಒಂದೇ ಬೆಳೆಗೆ ಸೀಮಿತವಾಗಿರುವ ತಾಲೂಕುಗಳ ಪರಿಸ್ಥಿತಿಯ ಅರಿವಿದೆ ಎಂದು ಮಾತು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಲು ಸೀಮೆ ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ ಜಾರಿಗೆ ಬದ್ಧವಿರುವುದಾಗಿ ಹೇಳುವ ಮೂಲಕ ಪರಮಶಿವಯ್ಯನವರ ವರದಿಗೆ ತಾವು ಉತ್ಸುಕವಾಗಿರುವುದಾಗಿ ತಿಳಿಸಿದರು.
ಮೊಯ್ಲಿ ಬದ್ಧ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಭರವಸೆ ನೀಡಿದ್ದಂತೆ ಮಾತನಾಡಿದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಬಯಲು ಸೀಮೆಗೆ ಶಾಶ್ವತ ನೀರಾವರಿ, ಕುಡಿಯುವ ನೀರೊದಗಿಸುವ ಪರಮಶಿವಯ್ಯನವರ ವರದಿ ಜಾರಿ ಅತ್ಯಗತ್ಯವಾಗಿದೆ. ಜತೆಯಲ್ಲಿ ಎತ್ತಿನ ಹೊಳೆ ಯೋಜನೆಯೂ ಜಾರಿಯಾಗಲಿದೆ ಎಂದು ಹೇಳುವ ಮೂಲಕ ಚುನಾವಣಾ ಪೂರ್ವ ಮಾತಿಗೆ ಬದ್ಧರಾದರು.