ಗೋಕಟ್ಟೆ ನಾಶ: ಜಮೀನಿಗೆ ಭಾರೀ ಪ್ರಮಾಣದ ನೀರು ಹರಿದು ಲಕ್ಷಾಂತರ ರು. ನಷ್ಟ
ಕ.ಪ್ರ. ವಾರ್ತೆ ಪಾವಗಡ ಜೂ. 1
ಸರ್ಕಾರ ನಿರ್ಮಾಣದ ಗೋಕಟ್ಟೆ ನಾಶ ಮಾಡಿದ ಪರಿಣಾಮ ನೀರಾವರಿ ಜಮೀನುಗಳಿಗೆ ಭಾರೀ ಪ್ರಮಾಣದ ನೀರು ಹರಿದು ಲಕ್ಷಾಂತರ ರು.ಗಳ ಬೆಳೆ ನಷ್ಟವಾಗಿದೆ. ಅಲ್ಲದೇ ಅಪಾರ ಪ್ರಮಾಣದ ಬೆಳೆನಷ್ಟಕ್ಕೆ ಕಾರಣನಾದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಸಂಗ ಶನಿವಾರ ಓಬಳಾಪುರ ಗ್ರಾಮದಲ್ಲಿ ನಡೆದಿದೆ.
ಬೆಟ್ಟದ ನೀರು ನೀರಾವರಿ ಜಮೀನುಗಳಿಗೆ ಹರಿಯದಂತೆ ಹಾಗೂ ಅಂತರ್ಜಲ ಹೆಚ್ಚಿಸುವ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಜಲಾನಯನ ಇಲಾಖೆ ವತಿಯಿಂದ ಓಬಳಾಪುರ ಗ್ರಾಮದ ಭೋವಿ ಈರಪ್ಪ ಎಂಬುವರ ಜಮೀನಿನಲ್ಲಿ ಲಕ್ಷಾಂತರ ರು.ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಲಾಗಿತ್ತು. ಕಳೆದ 2 ವರ್ಷಗಳ ಹಿಂದೆ ಗ್ರಾಮದ ರೈತ ಹಾಗೂ ಗುತ್ತಿಗೆದಾರ ಈಶ್ವರಪ್ಪ ಎಂಬುವವರು ಭೋವಿ ಈರಪ್ಪ ಎಂಬುವರ ಜಮೀನನ್ನು ಖರೀದಿಸಿದ್ದರೆನ್ನಲಾಗಿದ್ದು ಬೆಟ್ಟದ ನೀರು ಕೆಳಭಾಗದ ನೀರಾವರಿ ಜಮೀನುಗಳಿಗೆ ನುಗ್ಗದಂತೆ ಹಾಗೂ ಅಂತರ್ಜಲ ಹೆಚ್ಚುವ ಹಿನ್ನೆಲೆಯಲ್ಲಿ ಜಲಾನಯನ ಇಲಾಖೆ ವತಿಯಿಂದ ಆ ಜಮೀನಿನಲ್ಲಿ ನಿರ್ಮಿಸಿದ್ದ ಗೋಕಟ್ಟೆಯನ್ನು ಗುತ್ತಿಗೆದಾರ ಈಶ್ವರಪ್ಪ ಎಂಬುವವರು ಕೆಳ ಭಾಗದ ರೈತರ ವಿರೋಧದ ನಡುವೆಯು ಜಿಸಿಬಿಯಿಂದ ನಾಶಪಡಿಸಿದ್ದರು.
ಶುಕ್ರವಾರ ರಾತ್ರಿ ಬಿದ್ದ ಭಾರೀ ಮಳೆಯಿಂದ ಗೋಕಟ್ಟಗೆ ಸೇರಬೇಕಾದ ಬೆಟ್ಟದ ನೀರು ನೀರಾವರಿ ಜಮೀನುಗಳಿಗೆ ನುಗ್ಗಿದ ಪರಿಣಾಮ ರೈತ ರವೀಂದ್ರರೆಡ್ಡಿ ಎಂಬುವರಿಗೆ ಸೇರಿದ ಲಕ್ಷಾಂತರ ರು.ಗಳ ದಾಳಿಂಬೆ ಬೆಳೆ ನಷ್ಟವಾಗಿದೆ. ಅಲ್ಲದೇ ರಮಣರೆಡ್ಡಿ ಹಾಗೂ ರಘುನಾಥರೆಡ್ಡಿ ಹಾಗೂ ಸತ್ಯನಾರಾಯಣರೆಡ್ಡಿ ಎಂಬುವವರಿಗೆ ಸೇರಿದ ಫಸಲಿಗೆ ಬಂದಿದ್ದ ರಾಗಿ ಬೆಳೆ ಹಾಗೂ ದಾಳಿಂಬೆ ಬೆಳೆಗೆ ನೀರು ಹಾಯಿಸಲು ಬಿಟ್ಟಿದ್ದ ಹನಿ ನೀರವಾರಿ (ಡ್ರಿಪ್ ವೈರ್ಗಳು)ಮತ್ತು ಪ್ಲಾಸ್ಟಿಕ್ ಪೈಪುಗಳು ಸಂಪೂರ್ಣ ನಾಶವಾಗಿ ಅಪಾರ ಪ್ರಮಾಣದ ಬೆಳೆ ನಷ್ಚವಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆ ಕಂಡು ಬೆಳೆ ನಷ್ಟದಿಂದ ಕುಪಿತಗೊಂಡ ರೈತ ರವೀಂದ್ರರೆಡ್ಡಿ, ರಮಣರೆಡ್ಡಿ, ರಘುನಾಥ್ರೆಡ್ಡಿ ಹಾಗೂ ನರಸಿಂಹರೆಡ್ಡಿ ಎಂಬುವವರು ಬೆಳಿಗ್ಗೆ ಗ್ರಾಮಕ್ಕೆ ಆಗಮಿಸಿ ಜಮೀನಿನಲ್ಲಿ ನಿರ್ಮಿಸಿದ್ದ ಸರ್ಕಾರದ ಗೋಕಟ್ಟೆ ನಾಶ ಪಡಿಸಿದ ಗುತ್ತಿಗೆದಾರ ಈಶ್ವರಪ್ಪ ಎಂಬುವರನ್ನು ವಿಚಾರಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ದೌರ್ಜನ್ಯಕ್ಕೆ ಮುಂದಾದ ಈಶ್ವರಪ್ಪ ಅವರನ್ನು ಆ ರೈತರು ಸೇರಿ ತರಾಟೆಗೆ ತೆಗೆದುಕೊಂಡು ಥಳಿಸಿದ ಘಟನೆ ನಡೆದಿದೆ.ದೌರ್ಜನ್ಯದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಈಶ್ವರಪ್ಪ ಸೇರಿದಂತೆ ಬೆಳೆ ನಷ್ಟಕ್ಕೀಡಾದ ಸತ್ಯನಾರಾಯಣರೆಡ್ಡಿ, ರಮಣರೆಡ್ಡಿ ಎಂಬುವರು ತಾ.ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ತಹಸೀಲ್ದಾರ್ ಮಹಮ್ಮದ್ ಆಲ್ತಾಫ್ ಪಾಷ, ತಾಪಂ ಇಒ ರಂಗನಾಥ್, ರಂಗಸಮುದ್ರ ಗ್ರಾಪಂ ಅಧ್ಯಕ್ಷ ಈರಣ್ಣ, ಕಾರ್ಯದರ್ಶಿ ತೇಜಸ್ವಿ, ಮುಖಂಡರಾದ ತಿಪ್ಪೇಸ್ವಾಮಿ, ದೊಡ್ಡೇನಹಳ್ಳಿ ಶಿವಪ್ಪ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.