ಭಾರಿ ಮಳೆಗೆ ಮನೆಗಳು ಜಲಾವೃತ
ಕ.ಪ್ರ. ವಾರ್ತೆ ಪಾವಗಡ ಜೂ. 1
ಮಧುಗಿರಿ ಉಪವಿಭಾಗಧಿಕಾರಿ ಜಾರಿ ಮಾಡಿದ್ದ ಆದೇಶ ನಿರ್ಲಕ್ಷ್ಯ ಹಾಗೂ ಇಲಾಖೆ ಅಧಿಕಾರಿಗಳ ವೈಫಲ್ಯದಿಂದ ರಾತ್ರಿಯಿಡೀ ಬಿದ್ದ ಭಾರೀ ಮಳೆಗೆ ಅನೇಕ ಮನೆಗಳು ಜಲಾವೃತವಾದ ಘಟನೆ ತಾಲೂಕಿನ ಓಬಳಾಪುರ ದಲಿತ ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಓಬಳಾಪುರ ಸೇರಿದಂತೆ ಬಳಿಬಟ್ಟಲು, ಶೈಲಾಪುರ, ಮರಿದಾಸನಹಳ್ಳಿ, ರಂಗಸಮುದ್ರ ಕೊಟಗುಡ್ಡ, ಲಿಂಗದಹಳ್ಳಿ,ದೊಡ್ಡೇನಹಳ್ಳಿ ಬಿ.ಹೊಸಹಳ್ಳಿ, ಜಾಲೋಡು, ಆರಕ್ಯಾತನಹಳ್ಳಿ, ಸುತ್ತಮುತ್ತ ಗ್ರಾಮಗಳಲ್ಲಿ ಮಿಂಚು ಸಿಡಿಲು ಸೇರಿದಂತೆ ಭಾರಿ ಮಳೆಗೆ ಬಹುತೇಕ ಕೆರೆಗಳಿಗೆ ಅರ್ಧ ಭಾಗದಷ್ಟು ನೀರು ಬಂದಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಓಬಳಾಪುರ ಕಾಲೋನಿಗೆ ನೀರು ನುಗ್ಗಿ ರೈತನೊಬ್ಬ ತಡೆಗೋಡೆ ನಿರ್ಮಿಸಿದ ಪ್ರಯುಕ್ತ ಅಲ್ಲಿಯೇ ನೀರು ಶೇಖರಣೆ ಆಗಿ ಸುತ್ತಮುತ್ತಲಿನ ಅನೇಕ ಮನೆಗಳಿಗೆ ನೀರು ನುಗ್ಗಿ ಜಲಾವೃತ್ತ ದಿಂದ ಜೀವನ ಅಸ್ತವ್ಯಸ್ಥವಾಗಿದೆ.
ಕಳೆದ ನವಂಬರ್ನಲ್ಲಿ ಇದೇ ರೀತಿ ಓಬಳಾಪುರ ಗ್ರಾಮದಲ್ಲಿ ಮಳೆ ಬಿದ್ದು ಕಾಲೋನಿಯ ಮನೆಗಳಿಗೆ ನೀರು ನುಗ್ಗಿ ಜಲಾವೃತವಾದ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಧಿಕಾರಿ ಸಿ.ಅನಿತಾ, ತಹಸೀಲ್ದಾರ್ ಹಾಗೂ ತಾಪಂ ಇಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಗ್ರಾಮದಲ್ಲಿ ಕಾಲೋನಿಯ ಮನೆಗಳಿಗೆ ನೀರು ನುಗ್ಗದಂತೆ ಚರಂಡಿಗಳನ್ನು ನಿರ್ಮಿಸುವ ಮೂಲಕ ಪರ್ಯಾಯ ವ್ಯವಸ್ಥೆ ಕೂಡಲೇ ಕೈಗೊಳ್ಳಲು ತಹಸೀಲ್ದಾರ್ ಮಹಮ್ಮದ್ ಅಲ್ತಾಫ್ ಪಾಷ ಹಾಗೂ ತಾಪಂ ಇಒ ರಂಗನಾಥ್ ಅವರಿಗೆ ಸೂಚಿಸಿ ಕಾಮಗಾರಿ ನಿರ್ವಹಿಸಲು ಉಪವಿಭಾಗಾಧಿಕಾರಿ ಸಿ.ಅನಿತಾ ಅವರು ಆದೇಶಿಸಿದ್ದರು.
ಅಸ್ತವ್ಯಸ್ಥ: ಸರಗವಾಗಿ ಮಳೆ ನೀರು ಹರಿದು ಹೋಗಲು ಚರಂಡಿ ಸೇರಿದಂತೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯಿಸಿದ ಕಾರಣ ಜನರ ಜೀವನ ಅಸ್ತವ್ಯಸ್ಥವಾಗಿದೆ.
ಮಳೆಯಿಂದ ಮನೆಗಳು ಜಲಾವೃತವಾದ ವಿಷಯ ತಿಳಿಯುತ್ತಿದ್ದಂತೆ ಶನಿವಾರ ಬೆಳಿಗ್ಗೆ ಓಬಳಾಪುರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಹಮ್ಮದ್ ಆಲ್ತಾಫ್ ಪಾಷ ಹಾಗೂ ತಾಪಂ ಇಒ ರಂಗನಾಥ್ ಕಾಲೋನಿಯ ಮನೆಗಳನ್ನು ಪರಿಶೀಲಿಸಿದರು.
ನಂತರ ನೀರು ಹರಿದು ಹೋಗದಂತೆ ತಡೆಗೋಡೆ ನಿರ್ಮಿಸಿದ್ದ ರೈತನನ್ನು ಸ್ಥಳಕ್ಕೆ ಕರೆಸಿಕೊಂಡ ಇಒ ರಂಗನಾಥ್ ಹರಿಯುವ ನೀರನ್ನು ಅಡ್ಡಗಟ್ಟಿದ ಪರಿಣಾಮ ಇಲ್ಲಿಯೇ ನೀರು ಶೇಖರಣೆ ಆಗಿ ಮನೆಗಳು
ಜಲಾವೃತವಾಗಿ ನಷ್ಟವಾಗಿದೆ ಎಂದು ಎಚ್ಚರಿಸಿ ನೀರು ಹರಿದು ಹೋಗಲು ಚರಂಡಿ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಈ ಕೂಡಲೇ ತಾಪಂನಿಂದ 5ಲಕ್ಷ ಮಂಜೂರು ಮಾಡಿಸಿಕೊಡುವುದಾಗಿ ತಿಳಿಸಿದರು.