ಶನೇಶ್ವರ ಸ್ವಾಮಿ ಕುಂಭಾಭಿಷೇಕ ಮಹೋತ್ಸವ
ಹುಳಿಯಾರು: ಪಟ್ಟಣದ ಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳಿಂದ ಗಾಂಧಿ ಪೇಟೆಯಲ್ಲಿನ ಶನೇಶ್ವರಸ್ವಾಮಿ 9ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ಸಂಭ್ರಮದಿಂದ ಜರುಗಿತು. ಎರಡು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಶುಕ್ರವಾರ ರಾತ್ರಿ ಗ್ರಾಮ ದೇವತೆಗಳಾದ ದುರ್ಗಾ ಪರಮೇಶ್ವರಿ ಹಾಗೂ ಹುಳಿಯಾರಮ್ಮ, ಆಂಜನೇಯ ಸ್ವಾಮಿ ದೇವರುಗಳ ಆಗಮನದೊಂದಿಗೆ ಭೇಟಿ ನಡೆದು, ಅದೇ ದಿನ ರಾತ್ರಿ ಶನೇಶ್ವರ ಸ್ವಾಮಿಗೆ ಪುಣ್ಯಾಹ, ದೇವನಾಂದಿ, ಮಂಡಲ ಸ್ಥಾಪನೆ ಹಾಗೂ ಭಕ್ತರಿಂದ ಕಳಸ ಸ್ಥಾಪನೆ, ಪ್ರಧಾನ ಕಳಸ, ನವಗ್ರಹಗಳ ಸ್ಥಾಪನಾ ಕಾರ್ಯ ನಡೆಸುವುದರ ಮೂಲಕ ಚಾಲನೆಗೊಂಡಿತ್ತು. ಶನಿವಾರ ಬೆಳಗ್ಗೆ ಪುರೋಹಿತರಾದ ಎಚ್.ಎಸ್.ಲಕ್ಷ್ಮಿನರಸಿಂಹಯ್ಯ, ಎಚ್.ಕೆ.ಗುಂಡಣ್ಣ, ಸತ್ಯನಾರಾಯಣ, ಗಣೇಶ, ಗುಂಡಪ್ಪ ಅವರ ಪೌರೋಹಿತ್ಯದಲ್ಲಿ ಆಗಮಿಸಿದ್ದ ದೇವರುಗಳ ಸಮ್ಮುಖದಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಶನೇಶ್ವರ ಹೋಮ, ನವಗ್ರಹಾರಾಧನೆ, ಪಂಚಾಮೃತಾಭಿಷೇಕಗಳು ನಡೆಯಿತು. ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಕಳಸಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು. ಸಮಾರಂಭದಲ್ಲಿ ಜ್ಯೋತಿಪಣ ಗಾಣಿಗರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್, ಅಧ್ಯಕ್ಷ ಚಂದ್ರಶೇಖರ್(ಅಡುಗೆ), ಕಾರ್ಯದರ್ಶಿ ಬಸವರಾಜು, ಕಾತುರಯ್ಯ, ಪುಟ್ಟಯ್ಯ, ದುರ್ಗಮ್ಮದೇವಿ ದೇವಾಲಯ ಕಮಿಟಿ ಅಧ್ಯಕ್ಷ ಹು.ಕೃ.ವಿಶ್ವನಾಥ್, ಸುಬ್ರಮಣ್ಯ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.