ದಸರೀಘಟ್ಟ ಪ್ರೌಢಶಾಲೆ ಮಕ್ಕಳಿಗೆ ಬೈಸಿಕಲ್ ವಿತರಣೆ
ತಿಪಟೂರು: ಆದಿಚುಂಚನಗಿರಿ ಶಾಖಾಮಠವಾದ ತಾಲೂಕಿನ ಶ್ರೀ ಕ್ಷೇತ್ರ ದಸರೀಘಟ್ಟ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ಪ್ರೌಢಶಾಲೆ ಮಕ್ಕಳಿಗೆ ಬೈಸಿಕಲ್ ಮತ್ತು ಶಾಲಾ ಸಮವಸ್ತ್ರವನ್ನು ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿತರಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಜೆ.ಎನ್.ರಾಮಕೃಷ್ಣಗೌಡ, ದೇವಸ್ಥಾನದ ಟ್ರಸ್ಟಿ ಎ.ಜೆ.ಸಿದ್ದಪ್ಪ, ಡಾ.ಜೀತೇಂದ್ರ, ರೇಣುಕಾ ಸಂತೋಷ್ ಸೇರಿದಂತೆ ಮತ್ತಿತರರಿದ್ದರು.
ಯಲ್ಲಮ್ಮ ದೇವಿ ಸಂಪ್ರೋಕ್ಷಣ ಮಹೋತ್ಸವ
ಶಿರಾ: ತಾಲೂಕಿನ ಹುಲಿಕುಂಟೆ ಹೋಬಳಿ ಅಗ್ರಹಾರ ಗ್ರಾಮದಲ್ಲಿ ಜೂನ್ 2 ರಿಂದ ಶ್ರೀ ಮಹಾಗಣಪತಿ, ಶ್ರೀ ನವಗ್ರಹ ಮೃತ್ಯುಂಜಯ ಹೋಮಾದಿಗಳೊಂದಿಗೆ ಶ್ರೀ ಯಲ್ಲಮ್ಮ ದೇವಿ ಸಂಪ್ರೋಕ್ಷಣ ಮಹೋತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿದ್ದು ಜೂನ್ 3 ರಂದು ಗಂಗಾ ಪೂಜೆ, ಜಲದಿ ಮಹೋತ್ಸವ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ. ಜೂನ್ 4 ರಂದು ಜಲದಿ ಉತ್ಸವ ಆರತಿ ಮತ್ತು ತಲೆಯಪ್ಪಣೆ, ಬಲಿಹರಣ ಮಹಾಮಂಗಳಾರತಿ ನಡೆಯಲಿದೆ.
ವಿಷನ್ ಕೇರ್ ಟೆಕ್ನಿಷಿಯನ್ ಕೋರ್ಸ್ಗೆ ಅರ್ಜಿ
ಶಿರಾ: ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 2 ವರ್ಷದ ವಿಷನ್ ಕೇರ್ ಟೆಕ್ನಿಷಿಯನ್ ಕೋರ್ಸ್ (ದೃಷ್ಟಿ ರಕ್ಷಣೆ ತಂತ್ರಜ್ಞಾನ) ಗೆ ದಾಖಲಾಗಲು ಪಿ.ಯು.ಸಿ. ಸೈನ್ಸ್ ಪಾಸಾದ ಮಹಿಳಾ ಅಭ್ಯರ್ಥಿಗಳು ಜೂನ್ 5 ರೊಳಗೆ ವ್ಯವಸ್ಥಾಪಕರು ಧರತಿ ಫೌಂಡೇಷನ್, ಮದರ್ ಸಂಸ್ಥೆ, ಜ್ಯೋತಿನಗರ ಶಿರಾ ಇಲ್ಲಿಗೆ ಖುದ್ದಾಗಿ ಬಂದು ಅರ್ಜಿ ಪಡೆದು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಫೋ- 08135-277372 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
'ನಿತ್ಯ ಪಂಚಮುಖಿ ಆಂಜನೇಯಸ್ವಾಮಿ ದರ್ಶನ ಪುಣ್ಯಪ್ರದ'
ಬಾಣಾವರ: ಪ್ರತಿ ನಿತ್ಯ ಪಂಚಮುಖಿ ಆಂಜನೇಯಸ್ವಾಮಿ ದರ್ಶನ ಮಾಡಿದ ಭಕ್ತರು ಪುಣ್ಯವಂತರು ಎಂದು ಬೆಲಗೂರು ಕ್ಷೇತ್ರದ ವೀರಪ್ರತಾಪ ಬಿಂದು ಮಾಧವ ಶರ್ಮಾ ಸ್ವಾಮೀಜಿ ತಿಳಿಸಿದರು. ಬಾಣಾವರದಲ್ಲಿ ನೂತನ ಆಂಜನೇಯಸ್ವಾಮಿಯ ದೇವಾಲಯ ಪ್ರವೇಶ ಮತ್ತು ಬಿಂಬ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು. ದೇವಾಲಯದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದ ಅವರು, ತುಪ್ಪದ ಆಂಜನೇಯ ಸ್ವಾಮಿ ಎಂಬುದರ ಬದಲಾಗಿ ಸಂಜೀವರಾಯ ಆಂಜನೇಯ ಸ್ವಾಮಿ ಎಂಬುದಾಗಿ ಮರುನಾಮಕರಣ ಮಾಡಿದರು.