'ಶೀಘ್ರ ನ್ಯಾಯದಾನ ಮಾಡುವಲ್ಲಿ ಎಲ್ಲರ ಪಾತ್ರ ಮುಖ್ಯ'
ಕ.ಪ್ರ. ವಾರ್ತೆ ತಿಪಟೂರು ಜೂ. 3
ನ್ಯಾಯಾಲಯಗಳಲ್ಲಿರುವ ಹೆಚ್ಚಿನ ಕಡತಗಳು ವಿಲೇವಾರಿಯಾಗುವ ಮೂಲಕ ಕಕ್ಷಿದಾರರಿಗೆ ಶೀಘ್ರವಾಗಿ ನ್ಯಾಯ ಸಿಗುವ ವ್ಯವಸ್ಥೆಯನ್ನು ಸರಾಗಗೊಳಿಸಲು ನ್ಯಾಯಾಧೀಶರು, ವಕೀಲರು,ನ್ಯಾಯಂಗ ಸಿಬ್ಬಂದಿ ಹೆಚ್ಚು ಜವಾಬ್ದಾರಿ ಹೊರಬೇಕಿದೆ ಎಂದು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಎಚ್.ಬಿ.ಪ್ರಭಾಕರ ಶಾಸ್ತ್ರಿ ತಿಳಿಸಿದರು.
ತಿಪಟೂರಿನಲ್ಲಿ ಜಿಲ್ಲಾ 5ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದ ಅವರು ನ್ಯಾಯಾಲಯಕ್ಕೆ ಸಂಬಂಧಿಸಿದ ಕಟ್ಲೆಗಳನ್ನು ವಿಳಂಬ ಮಾಡದೆ ತ್ವರಿತ ವಿಲೇವಾರಿ ಮೂಲಕ ಜನರಿಗೆ ಉತ್ತಮ ನ್ಯಾಯವನ್ನು ನೀಡಬೇಕೆಂದರು. ಕಟ್ಲೆಗಳು ನ್ಯಾಯಯುತವಾಗಿ, ಕಾನೂನುಬದ್ಧವಾಗಿ ಶೀಘ್ರ ಇತ್ಯರ್ಥವಾಗಬೇಕು. ಇದಕ್ಕಾಗಿ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರ ಸಹಕಾರ ಮತ್ತು ಇಚ್ಛಾಶಕ್ತಿ ಮುಖ್ಯ. ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸಾರ್ವಜನಿಕರಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಹೊಣೆಗಾರರಾಗಬೇಕೆಂದರು. ನಗರದಲ್ಲಿ ನ್ಯಾಯಾಲದ ನೂತನ ಕಟ್ಟಡ ನಿರ್ಮಾಣ ಕಾರ್ಯ ತೀವ್ರ ವಿಳಂಬವಾಗುತ್ತಿದ್ದು, ನೂತನ ಕಟ್ಟಡದ ಕಾಮಗಾರಿಯನ್ನು ಜುಲೈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್. ಜಯಣ್ಣ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನೂತನ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ. ಗೀತಾ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜಶೇಖರ್, ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರಾದ ನಿರ್ಮಲಾ, ಹಿರಿಯ ವಕೀಲರಾದ ಎಚ್.ಎನ್.ಶೇಖರ್, ರಾಮಸ್ವಾಮಿ ಉಪಸ್ಥಿತರಿದ್ದರು. ವಕೀಲರಾದ ರಾಜೇಂದ್ರ ಪ್ರಸಾದ್ ಸ್ವಾಗತಿಸಿ, ಅಜಯ್ ವಂದಿಸಿದರು.